ಸಿಡ್ನಿ: ತಾಂತ್ರಿಕ ದೋಷದಿಂದ ಕ್ವಾಂಟಾಸ್ ಫ್ಲೈಟ್‌ನ (Qantas Flight) ಎಲ್ಲಾ ಟಿವಿ ಪರದೆಯ ಮೇಲೆ ನೀಲಿ ಚಿತ್ರ ಪ್ರಸಾರವಾದ ಘಟನೆ ಇತ್ತೀಚೆಗೆ ನಡೆದಿದೆ. ಸಿಡ್ನಿಯಿಂದ (Sydney) ಟೋಕಿಯೊಗೆ (Tokyo) ಹೊರಟಿದ್ದ ಕ್ವಾಂಟಾಸ್ ವಿಮಾನದ ಎಲ್ಲಾ ಟಿವಿ ಪರದೆಯ ಮೇಲೆ ಅನಿರೀಕ್ಷಿತವಾಗಿ ಒಂದು ಗಂಟೆಗಳ ಕಾಲ ಹೀಗೆ ನೀಲಿ ಚಿತ್ರ ಪ್ರಸಾರವಾಗಿದೆ ಎಂದು ವರದಿಯಾಗಿದೆ.
ಪ್ರಸಾರವಾಗುತ್ತಿದ್ದ ಚಿತ್ರವನ್ನು ಆಫ್ ಮಾಡಲು, ಸ್ಟಾಪ್ ಮಾಡಲು ಹಾಗೂ ಮುಂದೆ ಓಡಿಸಲು ಸಹ ಪ್ರಯಾಣಿಕರಿಗೆ ಸಾಧ್ಯವಾಗಿಲ್ಲ. ಈ ವೇಳೆ ಪ್ರಯಾಣಿಕರು (Passenger) ಆಘಾತಕ್ಕೊಳಗಾಗಿದ್ದಾರೆ. ವಿಮಾನದಲ್ಲಿನ ಟಿವಿ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ರೀತಿಯಾಗಿದೆ. ಇದರಿಂದ ಮಕ್ಕಳು ಹಾಗೂ ಅನೇಕ ಜನ ಮುಜುಗರಕ್ಕೊಳಗಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರೊಬ್ಬರು ಪೋಸ್ಟ್ ಹಾಕಿದ್ದು, ನಾನು ಸಿಡ್ನಿಯಿಂದ ಹನೆಡಾಗೆ ಕ್ವಾಂಟಾಸ್ ಫ್ಲೈಟ್ QF59 ನಲ್ಲಿ ಹೊರಟಿದ್ದೆ. ವಿಮಾನದಲ್ಲಿನ ಮನರಂಜನಾ ವ್ಯವಸ್ಥೆಯು ಸ್ಥಗಿತಗೊಂಡಿತ್ತು. ಈ ವೇಳೆ ನಗ್ನತೆ ಹಾಗೂ ಸೆಕ್ಸ್‌ನಂತಹ ದೃಶ್ಯಗಳು ಪ್ರಸಾರವಾಗಿದೆ. ಇದನ್ನು ಸರಿಪಡಿಸಲು ವಿಮಾನದ ಸಿಬ್ಬಂದಿ ಒಂದು ಗಂಟೆಕಾಲ ಪರದಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕ್ವಾಂಟಾಸ್‌ನ ವಕ್ತಾರರು ಘಟನೆಯನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಗ್ರಾಹಕರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಉಳಿದ ವಿಮಾನಗಳ ಎಲ್ಲಾ ಟಿವಿಗಳಲ್ಲೂ ಕುಟುಂಬ ಸ್ನೇಹಿ ಚಲನಚಿತ್ರಕ್ಕೆ ಬದಲಾಯಿಸಲಾಗಿದೆ. ತಾಂತ್ರಿಕ ದೋಷದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.