ಮಡಿಕೇರಿ: ಕಟ್ಟಿಗೆ ತರಲು ಕಾಡಿಗೆ ಹೋಗಿದ್ದ ಆದಿವಾಸಿ ಯುವಕರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಆರೋಪ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಸಮೀಪದ ಅಣ್ಣಿಗೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ದಿಡ್ಡಳ್ಳಿ ನಿವಾಸಿಗಳಾದ ನಾಗೇಶ್ ಹಾಗೂ ಸೋಮು ವಾಪಸ್ ಬರುವಾಗ ಅರಣ್ಯ ರಕ್ಷಕರಾದ ನಾಗೇಶ್ ಮತ್ತು ತಿಮ್ಮ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದಿಡ್ಡಳ್ಳಿಯಿಂದ ಅಣ್ಣಿಗೇರಿಗೆ ಎಳೆದೊಯ್ದು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಕೈ, ಕಾಲು ಭಾಗ ಊತ ಬರುವಂತೆ ಮನಸೋ ಇಚ್ಛೆ ಥಳಿಸಿದ್ದಾರೆ.
Advertisement
ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಕತ್ತರಿಸಿ ನಮ್ಮ ವಿರುದ್ಧ ಸುಳ್ಳು ಹೇಳಿದ್ದಾರೆ. ಮೂಲ ನೆಲೆಗಳಲ್ಲಿ ಗೆಡ್ಡೆ, ಗೆಣಸು, ಮೇವು ಹಾಗೂ ಉರುವಲಿಗೆ ಒಣ ಮರಗಳನ್ನು ಬಳಸಿಕೊಳ್ಳುವ ಹಕ್ಕು ಆದಿವಾಸಿಗಳಿಗೆ ಇದೆ. ಹೀಗಿದ್ದರೂ ವಿನಾಃ ಕಾರಣ ಹಲ್ಲೆ ಮಾಡಿದ್ದಾರೆ. ಕೂಡಲೇ ಇಬ್ಬರನ್ನೂ ಅಮಾನತು ಮಾಡಬೇಕು. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವ ಮತ್ತಿಗೋಡಿನ ಆರ್‍ಎಫ್‍ಓ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.