– ಬುದ್ಧಿ ಹೇಳಿದ್ದರೂ ಬದಲಾಗದ ಆದಿತ್ಯ ರಾವ್
– ಮನೆಗೆ ಬರಬೇಡ ಎಂದಿದ್ದ ತಂದೆ
– ಬೆದರಿಕೆ ಕರೆಯಿಂದ ತಂದೆಗೆ ನೋವಾಗಿದೆ
ಮಂಗಳೂರು: ಆದಿತ್ಯ ರಾವ್ ನನ್ನ ಅಣ್ಣ ಹೌದು, ಆದರೆ ಕಳೆದ ಬಾರಿ ಬಾಂಬ್ ಬೆದರಿಕೆ ಹಾಕಿದಾಗಲೇ ನಾವು ಆತನನ್ನು ಬಿಟ್ಟಿದ್ದೇವೆ. ಮನೆಗೆ ಬರಬೇಡ ಎಂದು ತಂದೆ ಸಹ ಹೇಳಿದ್ದಾರೆ. ಚಿಕ್ಕವನಿದ್ದಾಗ ಒಳ್ಳೆಯವನಾಗಿಯೇ ಇದ್ದ. ಇತ್ತೀಚೆಗೆ ಈ ರೀತಿ ಮಾಡುತ್ತಿದ್ದಾನೆ ಎಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಸಹೋದರ ಅಕ್ಷತ್ ರಾವ್ ವಿವರಿಸಿದ್ದಾರೆ.
ಮಂಗಳೂರಿನ ಚಿಲಿಂಬಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಕರೆ ಮಾಡಿದಾಗ ಆದಿತ್ಯನಿಗೆ ಬುದ್ಧಿ ಹೇಳಿದ್ದೇವೆ. ಬುದ್ಧಿ ಮಾತು ಕೇಳದಿದ್ದಾಗ ಅವನನ್ನು ಮನೆಯಿಂದಲೇ ಹೊರಗೆ ಹಾಕಿದ್ದೇವೆ. ಈಗ ನಮ್ಮ ಜೊತೆ ಅವನ ಸಂಪರ್ಕ ಇಲ್ಲ. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಅವನ ಕೃತ್ಯಕ್ಕೆ ಜವಬ್ದಾರರಾಗಲು ನಮ್ಮಿಂದ ಸಾಧ್ಯವಿಲ್ಲ. ಕಳೆದ ಎರಡು ವರ್ಷಗಳಿಂದ ಅವನ ಜೊತೆ ನಮಗೆ ಸಂಪರ್ಕ ಇಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟಿದ್ದೇವೆ. ನಾವು ಇಬ್ಬರೇ ಮಕ್ಕಳು, ಮೂಲತಃ ಮಣಿಪಾಲದವರಾದ ನಾವು ಮಂಗಳೂರಿಗೆ ಬಂದು 6 ತಿಂಗಳಾಯಿತು ಎಂದು ಮಾಹಿತಿ ನೀಡಿದರು.
Advertisement
Advertisement
ಚಿಕ್ಕಂದಿನಿಂದ ಸರಿಯಾಗಿಯೇ ಇದ್ದ, ನಂತರ ನಾನು 8ನೇ ತರಗತಿಯಿಂದ ಹಾಸ್ಟೆಲಿಗೆ ಸೇರಿಕೊಂಡೆ. ಆತನೂ ಸಹ ಹಾಸ್ಟೆಲ್ ಸೇರಿದ, ನಂತರ ನಾವಿಬ್ಬರೂ ಒಟ್ಟಿಗೆ ಇದ್ದದ್ದು ಕಡಿಮೆ. ಕುಟುಂಬದವರೆಲ್ಲ ಸೇರಿದಾಗ ನಾವೂ ಸೇರುತ್ತಿದ್ದೆವು. ಆದಿತ್ಯ ಎಂಬಿಎ ಮತ್ತು ಬಿಇ ವಿದ್ಯಾಭ್ಯಾಸ ಮಾಡಿದ್ದಾನೆ. ಇತ್ತೀಚೆಗೆ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾನೆ. ಅವನನ್ನು ಸರಿ ಮಾಡಲು ತಂದೆ ಸಹ ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ, ಹೀಗಾಗಿ ನಾವು ಅವನನನ್ನು ಬಿಟ್ಟಿದ್ದೇವೆ. ಕಳೆದ ಎರಡು ವರ್ಷಗಳಿಂದ ಅವನ ನಮ್ಮ ನಡುವೆ ಯಾವುದೇ ರೀತಿಯ ಸಂಪರ್ಕವಿಲ್ಲ ಎಂದು ತಿಳಿಸಿದರು.
Advertisement
ಕೊನೆಯದಾಗಿ 2019ರ ಫೆಬ್ರವರಿಯಲ್ಲಿ ತಾಯಿ ತೀರಿಕೊಂಡಾಗ ಆದಿತ್ಯಗೆ ಕರೆ ಮಾಡಿದ್ದೆವು. ಆಗ ಆತ ಚಿಕ್ಕಬಳ್ಳಾಪುರದ ಜೈಲಿನಲ್ಲಿದ್ದ. ಹಿರಿಯ ಮಗನಾದ ಹಿನ್ನೆಲೆಯಲ್ಲಿ ಆತನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೆವು. ಜೈಲಾಧಿಕಾರಿಗಳಿಗೆ ತಿಳಿಸಿ ಕಳುಹಿಸಲು ತಿಳಿಸಿದೆವು, ಆತ ಬರಲಿಲ್ಲ. ಹೀಗಾಗಿ ನಾನೇ ತಾಯಿಯ ಸಾವಿನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದೆ. ಅವನ ಕೃತ್ಯದ ಬಗ್ಗೆ ತಿಳಿಯುವ ಆಸಕ್ತಿ ನಮಗಿಲ್ಲ. ಈ ವಿಚಾರದಲ್ಲಿ ನಾವು ಅವನಿಗೆ ಬೆಂಬಲ ನೀಡಿಲ್ಲ, ಪೊಲೀಸರ ಎಲ್ಲ ತನಿಖೆಗೆ ಸಹಕರಿಸಿದ್ದೇವೆ. ಅಲ್ಲದೆ ಆತನಿಗೆ ಜಾಮೀನು ಪಡೆಯಲು ಸಹಾಯ ಮಾಡಿಲ್ಲ, ಮಾಡುವುದೂ ಇಲ್ಲ. ಅವನ ಬಗ್ಗೆ ನಮಗೂ ಭಯವಿದೆ. ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ನೀಡುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದೇವೆ ಎಂದರು.
Advertisement
ಈ ವೇಳೆ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಎನ್ನುವ ಪ್ರಶ್ನೆಗೆ, ಆತ ಎಲ್ಲಿದ್ದಾನೆ ಎನ್ನುವುದು ನಮಗೆ ಗೊತ್ತಿಲ್ಲ. ಮಾಧ್ಯಮಗಳಿಂದಾಗಿ ಮಂಗಳೂರಿನಲ್ಲಿದ್ದಾನೆ ಎನ್ನುವ ವಿಚಾರ ತಿಳಿಯುತು ಎಂದು ಉತ್ತರಿಸಿದರು.