ಆಟೋ ಓಡಿಸೋ ಮೂಲಕ ಬದುಕಿನ ಬಂಡಿ ಕಟ್ಟಿಕೊಂಡ ಆದಿಲಕ್ಷ್ಮಮ್ಮ

Public TV
2 Min Read
ckb lady auto driver 2

ಚಿಕ್ಕಬಳ್ಳಾಪುರ: ಉದ್ಯೋಗಂ ಪುರುಷ ಲಕ್ಷಣಂ ಅನ್ನೋ ಹಳೆಯ ಗಾದೆ ಮಾತು ಈಗ ಅಕ್ಷರಶಃ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಆಟೋ ಬಸ್, ಲಾರಿಗಳ ಚಾಲನೆಯಲ್ಲಿ ಪುರಷರದ್ದೇ ಪ್ರಾಬಲ್ಯ. ಅಂತದ್ರಲ್ಲಿ ಒರ್ವ ದಿಟ್ಟ ಮಹಿಳೆ ತನ್ನ ಮಕ್ಕಳ ಭವಿಷ್ಯ ಹಾಗೂ ಜೀವನ ನಿರ್ವಹಣೆಗೆ ಆಟೋ ಓಡಿಸುವ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಧೀರ ಮಹಿಳೆ ಆದಿಲಕ್ಷ್ಮಮ್ಮ.

ಗಂಡ ಸತ್ತು ಹೋದ ಬಳಿಕ ಆತ್ಮ ಸ್ಥೈರ್ಯ ಕಳೆದುಕೊಳ್ಳುದೇ ಆದಿಲಕ್ಷ್ಮಮ್ಮ ಆಟೋ ಓಡಿಸುವ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಧೀರ ಮಹಿಳೆ. ಗಂಡ ಸತ್ತ ಬಳಿಕ ಮೂಲೆ ಸೇರದೆ ಆದಿಲಕ್ಷ್ಮಮ್ಮ ನಗರದಲ್ಲಿ ಆಟೋ ಓಡಿಸುವ ಮೂಲಕ ಜಿಲ್ಲೆಯ ಮೊದಲ ಮಹಿಳಾ ಆಟೋ ಚಾಲಕಿ ಎಂದೆನಿಸಿದ್ದಾರೆ.

ckb lady auto driver 1

ಆದಿಲಕ್ಷ್ಮಮ್ಮ ಜಿಲ್ಲೆಯ ಗೌರಿಬಿದನೂರು ನಗರದ ಅಂಬೇಡ್ಕರ್ ಕಾಲೋನಿಯ ನಿವಾಸಿ. ಇವರ ಪತಿ ಶ್ಯಾಮಪ್ಪ ಐದು ತಿಂಗಳ ಹಿಂದೆ ಅತಿಯಾದ ಕುಡಿತದಿಂದ ಸಾವನ್ನಪ್ಪಿದ್ದರು. ಆದಿಲಕ್ಷಮ್ಮರಿಗೆ 15 ವರ್ಷದ ಶೇಖರ್ ಮತ್ತು 14 ವರ್ಷದ ವಂಶಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಸದ್ಯ ಸರ್ಕಾರಿ ಶಾಲೆಯೊಂದರಲ್ಲಿ ಒರ್ವ 9 ನೇ ತರಗತಿ ಹಾಗೂ ಮತ್ತೊರ್ವ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಳಗ್ಗೆ ಬೇಗನೆ ಎದ್ದು ಮಕ್ಕಳಿಗೆ ಆಡುಗೆ ಮಾಡಿ ಉಣಬಡಿಸಿ, ಮಕ್ಕಳನ್ನ ಶಾಲೆಗೆ ಕಳುಹಿಸಿ ತಾವೂ ಕೂಡ ಯೂನಿಫಾರ್ಮ್ ಧರಿಸಿ ಆಟೋ ಓಡಿಸುವ ಕಾಯಕ್ಕೆ ತೆರಳುತ್ತಾರೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಆಟೋ ಓಡಿಸುವ ಮೂಲಕ ದುಡಿದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಗೌರಿಬಿದನೂರು ನಗರದ ಮಾನಸ ಆಸ್ಪತ್ರೆಯ ಸರ್ಕಲ್ ನ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ನಿಲ್ಲಿಸೋ ಈ ಆದಿಲಕ್ಷಮ್ಮರಿಗೆ ಬೇರೆ ಆಟೋ ಚಾಲಕರು ಸಹಕಾರ ನೀಡುತ್ತಿದ್ದಾರೆ. ಮೊದಲು ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಆದಿಲಕ್ಷ್ಮಮ್ಮ ಮಕ್ಕಳನ್ನು ಸಾಕುವುದಕ್ಕೆ ಕಷ್ಟ ಆಗ್ತಿತಂತೆ. ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಅಡುಗೆ ಮಾಡಿ ಊಟ ಮಾಡಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.

ಕಡು ಕಷ್ಟದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಆದಿಲಕ್ಷಮ್ಮ ಮಕ್ಕಳ ಭವಿಷ್ಯಕ್ಕಾಗಿ ದಿಟ್ಟತನದಿಂದ ಬದುಕನ್ನ ಎದುರಿಸುತ್ತಿದ್ದಾರೆ. ಯಾವ ಭಯ, ಅಂಜಿಕೆ, ಅಳುಕು, ಯಾರ ಮುಲಾಜು ಇಲ್ಲದೆ ಆಟೋ ಚಲಾಯಿಸ್ತಿರೋ ಆದಿಲಕ್ಷ್ಮಮ್ಮ ಮಹಿಳಾ ದಿನಾಚರಣೆ ಅಂಗವಾಗಿ ಇತರೆ ಮಹಿಳೆಯರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸೋಣ.

 

Share This Article
Leave a Comment

Leave a Reply

Your email address will not be published. Required fields are marked *