ಕೋಲ್ಕತಾ: ಅತ್ಯಾಚಾರ ಪ್ರಕರಣದಲ್ಲಿ ಬಂಗಾಳದ ಕ್ರಿಕೆಟಿಗ, ಐಪಿಎಲ್‌ನಲ್ಲಿ (IPL) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ಆಡುತ್ತಿದ್ದ ಕ್ರಿಕೆಟಿಗ ಅಭಿಷೇಕ್ ಪೊರೆಲ್ (Abhishek Porel) ಅವರನ್ನು ಅರೆಸ್ಟ್ ಮಾಡಲಾಗಿದೆ.
ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣ ಸಂಬಂಧ ಇತ್ತೀಚಿಗಷ್ಟೇ ಕೋಲ್ಕತ್ತಾ ಹೈಕೋರ್ಟ್ (Kolkatta HighCourt) ಶೀಘ್ರವೇ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪದಡಿ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನಕ್ಕೆ ಕೋರ್ಟ್ ಆದೇಶ

ಹೂಗ್ಲಿ ಗ್ರಾಮಾಂತರ ಪೊಲೀಸ್ ಎಸ್ಪಿ ಕುನ್ವರ್ ಭೂಷಣ್ ಸಿಂಗ್ ಅವರು ಮಾಹಿತಿ ನೀಡಿದ್ದು, ದಮ್ ದಮ್ ಪೊಲೀಸ್ ಠಾಣಾ ವ್ಯಾಪ್ತಿಯ ಎಮಾಮಿ ಸಿಟಿಯಿಂದ ಪೊಲೀಸರು ಅಭಿಷೇಕ್ ಅನ್ನು ಬಂಧಿಸಿದ್ದಾರೆ ಎಂದಿದ್ದಾರೆ.
ಸಂತ್ರಸ್ತೆ ಆರೋಪವೇನು?
ನಾನು ಮತ್ತು ಪೊರೆಲ್ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದೆವು. ಕಳೆದ ವರ್ಷ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಇದಾದ ನಂತರ ಪೊರೆಲ್ ಅವರು ನನ್ನಿಂದ ದೂರ ಉಳಿಯಲು ಪ್ರಾರಂಭಿಸಿದರು. ಮೊದಲು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೀಗ ಅದಕ್ಕೆ ಒಪ್ಪುತ್ತಿಲ್ಲ. ಮದುವೆಯಾಗುವುದಾಗಿ ತಿಳಿಸಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು. ಅಲ್ಲದೇ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಅತ್ಯಾಚಾರ, ಹಲ್ಲೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ತಮ್ಮ ವಿರುದ್ಧ ಕೇಳಿಬಂದಿರುವ ಎಲ್ಲಾ ಆರೋಪಗಳನ್ನು ಅಭಿಷೇಕ್ ಪೊರೆಲ್ ತಳ್ಳಿಹಾಕಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.ಇದನ್ನೂ ಓದಿ: ಯಾರು ಬರಲಿ, ಬಿಡಲಿ ಕಾವೇರಿಗಾಗಿ ಬಂದ್ ಮಾಡೇ ಮಾಡ್ತೀವಿ: ವಾಟಾಳ್ ನಾಗರಾಜ್

