ಬೆಂಗಳೂರು: ಖ್ಯಾತ ನಟಿ, ಗಾಯಕಿ ವಸುಂದರಾ ದಾಸ್ ಅವರಿಗೆ ಕ್ಯಾಬ್ ಚಾಲಕನೊಬ್ಬ ಅಡ್ಡಗಟ್ಟಿ ನಿಂದನೆ ಮಾಡಿರುವ ಘಟನೆ ನಗರದ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಲ್ಲಿ ನಡೆದಿದೆ.
ವಸುಂದರಾ ದಾಸ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕ್ಯಾಬ್ ಚಾಲಕ ತನ್ನ ಕಾರಿಗೆ ದಾರಿ ನೀಡಲಿಲ್ಲ ಎಂದು ಕೋಪಗೊಂಡು ನಿಂದಿಸಿದ್ದಾರೆ. ಈ ಕುರಿತು ವಸುಂದರಾ ದಾಸ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಡೆದಿದ್ದೇನು?
ಆ.29 ರಂದು ನಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಘಟನೆ ನಡೆದಿದ್ದು, ಸಂಜೆ 4.30 ರ ಸಮಯದಲ್ಲಿ ವಸುಂದರಾ ದಾಸ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಇಟಿಯೋಸ್ ಕಾರಿನ ಚಾಲಕ ಸಿಗ್ನಲ್ ನಲ್ಲಿ ನಿರಂತರ ಹಾರ್ನ್ ಮಾಡಿದ್ದಾನೆ. ಭಾಷ್ಯಂ ಸರ್ಕಲ್ ಸಿಗ್ನಲ್‍ನಿಂದ ಹಿಂಬಾಲಿಸಿ ಬಳಿಕ ಅವರ ಕಾರನ್ನು ಅಡ್ಡಗಟ್ಟಿ ನಿಂದನೆ ಮಾಡಿದ್ದಾನೆ. ಈ ವೇಳೆ ಕಾರಿನ ಡೋರ್ ತೆಗೆಯಲು ಯತ್ನಿಸಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ವಸುಂದರಾ ದಾಸ್ ಅವರು ದೂರು ದಾಖಲಿಸಿದ್ದು, ಕಾರ್ ನಂಬರ್ ಕೆಎ-05 ಇ-3933 ನ ಕ್ಯಾಬ್ ಚಾಲಕನಿಂದ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಕ್ಯಾಬ್ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 509, 341, 354 ಮತ್ತು 504ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಾರು ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ವಾಹನ ಸಂಖ್ಯೆಯನ್ನು ಪರಿವಾಹನ್ ಪೋರ್ಟಲ್ ನಲ್ಲಿ ಪರಿಶೀಲನೆ ನಡೆಸಿದ ವೇಳೆ ಕಾರು ಅಮ್ಜದ್ ಪಾಷಾ ಎಂಬವರ ಹೆಸರಲ್ಲಿ ನೋಂದಣಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv