– ವೈಯಕ್ತಿವಾಗಿ ಯಾರು ಎಷ್ಟೇ ದೊಡ್ಡವರಿದ್ದರೂ ಚೌಕಟ್ಟಿನಲ್ಲಿ ಇರಬೇಕು
– ಅಭಿಮಾನಿಗಳು ಶಾಂತವಾಗಿ ಇರಿ ಎಂದು ನಟಿ ಸಲಹೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಮತ್ತೆ ಜೈಲುಪಾಲಾದ ಬಗ್ಗೆ ಹಿರಿಯ ನಟಿ ಉಮಾಶ್ರೀ (Umashree) ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ವ್ಯಾಪಾರ ಜಗತ್ತಿನಲ್ಲಿ ಒಳ್ಳೆಯ ಕೊಡುಗೆ ಕೊಟ್ಟಿದ್ದಾರೆ. ಅವರ ಬಂಧನ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ನಟಿ ಹೇಳಿಕೆ ನೀಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಉಮಾಶ್ರೀ, ಸುಪ್ರೀಂ ಕೋರ್ಟ್‌ನ ಬೆಳವಣಿಗೆಯನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸಬೇಕು. ನಮಗು ಕೂಡ ಅದು ಅನಿವಾರ್ಯ. ನಾನು ಅವತ್ತು ಕೂಡ ಹೇಳಿದ್ದೆ, ಇವತ್ತೂ ಹೇಳುತ್ತೇನೆ. ನಾವು ಕಲಾವಿದರು, ಸಮಾಜದ ಸ್ವತ್ತು. ನಮ್ಮನ್ನ ಗಮನಿಸುತ್ತಿರುತ್ತಾರೆ. ಹಾಗಾಗಿ, ನಮ್ಮ ಪ್ರತಿಯೊಂದು ಮಾತು, ಕೃತಿ ಚೌಕಟ್ಟಿನಲ್ಲಿ ಇರುವುದನ್ನ ನಿರೀಕ್ಷೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್ ಅರೆಸ್ಟ್
ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ವಿಚಾರವಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯ ಇದೆ. ಟೀಕೆ-ಪ್ರಶಂಸೆಗಳು ಸಹಜವಾಗಿ ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅಭಿವ್ಯಕ್ತಿ ಪಡಿಸುವಲ್ಲಿ ಪರ-ವಿರುದ್ಧ ಮಾತನಾಡುವಾಗ, ಸಂಯಮ ಕಳೆದುಕೊಂಡಾಗ ಈ ರೀತಿ ಘಟನೆಗಳು ನಡೆಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ನನ್ನ ಅನುಭವದಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಎಲ್ಲರ ಅಭಿಮಾನಿಗಳನ್ನು ನೋಡಿದ್ದೇನೆ. ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ. ಬಹಳ ಎಂದರೆ ಕೂಗಾಡುತ್ತಿದ್ದರು, ಕಿರುಚಾಡುತ್ತಿದ್ದರು. ಆ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದರು, ಅಲ್ಲಿಗೆ ಮುಗಿಯುತ್ತಿತ್ತು. ಸೋಷಿಯಲ್ ಮೀಡಿಯಾ ಬಂದ ನಂತರ ಅಭಿಮಾನಿಗಳ ಜೊತೆ ಹೊಸ ಪೀಳಿಗೆಯ ಅಭಿಮಾನಿಗಳು ಇದ್ದಾರೆ. ಅವರು ಪ್ರಬುದ್ಧವಾದ ಚಿಂತನೆ ಇಟ್ಟುಕೊಂಡಿದ್ದರೆ ಸಾಮಾಜಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಂತ ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಜಾಮೀನು ರದ್ದು – ಸುಪ್ರೀಂ ಕೋರ್ಟ್ ತೀರ್ಪಿನಲ್ಲೇನಿದೆ?
ದರ್ಶನ್ ವ್ಯಾಪಾರ ಜಗತ್ತಿನಲ್ಲಿ ಒಳ್ಳೆಯ ಕೊಡುಗೆಯನ್ನ ಕೊಟ್ಟಿದ್ದಾನೆ. ಇದರಿಂದ ಚಿತ್ರರಂಗಕ್ಕೆ ಬಹಳ ಒಳ್ಳೆಯದು ಆಗಿದೆ. ಇಲ್ಲ ಅಂತ ಹೇಳೋಕೆ ಆಗಲ್ಲ. ಈಗಿನ ಬೆಳವಣಿಗೆಯಿಂದ ನಷ್ಟವೂ ಕೂಡ ಆಗಿದೆ. ಅವನಿಂದ ಬಹಳಷ್ಟು ಒಳ್ಳೆಯ ಕೆಲಸ ಆಗೋದಿತ್ತು. ಇದು ಇಷ್ಟಕ್ಕೆ ಮುಗಿದು ಹೋಗುತ್ತೆ ಅಂತ ಅನ್ನಿಸ್ತ ಇಲ್ಲ. ಇನ್ನೂ ಕೇಸ್ ಆಗಬೇಕು. ಕೋರ್ಟ್ನಲ್ಲಿ ತೀರ್ಮಾನ ಆಗಬೇಕು. ಏನು ಆಗುತ್ತೋ ಗೊತ್ತಿಲ್ಲ. ಇಷ್ಟಕ್ಕೆ ನಿರಾಸೆ ಆಗೋದು ಬೇಡ. ಯಾರೋ ಒಬ್ಬರಿಗೆ ನ್ಯಾಯ ಅಂತು ಸಿಗಬೇಕಲ್ಲ. ಅಭಿಮಾನಿಗಳಿಗೆ ಹೇಳೋದು ಇಷ್ಟೆ. ಸ್ವಲ್ಪ ಶಾಂತವಾಗಿ ಇರಿ ಎಂದು ಸಲಹೆ ನೀಡಿದ್ದಾರೆ.
ಸಮಾಜ ನಮ್ಮನ್ನ ನೋಡ್ತಾ ಇರುತ್ತೆ. ನಮ್ಮ ನಡೆ-ನುಡಿ, ಉಡುಗೆ-ತೊಡಿಗೆ ಎಲ್ಲವನ್ನು ಬಹಳ ಅಭಿಮಾನದಿಂದ ಕಾಣ್ತಾ ಇರ್ತಾರೆ. ವೈಯುಕ್ತಿಕವಾಗಿ ಅವರು ಎಷ್ಟೇ ದೊಡ್ಡವರಾದರೂ ಚೌಕಟ್ಟಿನಲ್ಲಿ ಇರಬೇಕು. ರಾಜ್‌ಕುಮಾರ್, ವಿಷ್ಣುವರ್ಧನ್, ಸರೋಜಾ ದೇವಿ ಹೇಗಿದ್ದರು ಎಂದು ಉಮಾಶ್ರೀ ಮಾತನಾಡಿದರಲ್ಲದೇ, ಇದು ನೋವಿನ ಸಂಗತಿ. ಈ ರೀತಿ ಆಗಬಾರದಿತ್ತು. ಹೀಗೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.