ಬೆಂಗಳೂರು: ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯನ್ನು ವಿವರಿಸಲು ರೇಪ್ ಉದಾಹರಣೆಯನ್ನು ಸದನದಲ್ಲಿ ಪ್ರಸ್ತಾಪಿಸಿದ ಬಗ್ಗೆ ಬಿಜೆಪಿ ನಾಯಕಿ ತಾರಾ ಅವರು ಬೇಸರ ವ್ಯಕ್ತಪಡಿಸಿ, ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ವಿಧಾನಸಭೆ ಸದನದಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಅತ್ಯಂತ ಹಗುರವಾಗಿ ಪರಿಗಣಿಸಿ, ಅತ್ಯಾಚಾರದ ವಿಚಾರಣೆಯನ್ನು ಹಾಸ್ಯ ಪ್ರಸಂಗವೆಂಬಂತೆ ಆಡಿರುವ ನಿಮ್ಮ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ. ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಸದನದ ಸದಸ್ಯರ ಮಾತು, ನಡಾವಳಿಗಳನ್ನು ಘನತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಮರೆತು ನೀವು ಹೀಗೆ ಮಾತನಾಡಿರುವುದು ಬಹಳ ಖೇದಕರ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಸದನದಲ್ಲಿ ನಿಮ್ಮ ಆ ಮಾತುಗಳನ್ನು ತಮಾಷೆಯೆಂಬಂತೆ ನಗುತ್ತಾ ಆಸ್ವಾದಿಸಿದ ಸದನದ ಘನ ಸದಸ್ಯರ ಹೀನ ಮನಸ್ಥಿತಿ ಮತ್ತು ಇಂತಹದ್ದನ್ನು ಕಂಡೂ ಖಂಡಿಸದೇ ಉಳಿದ ಮಹಿಳಾ ಸದಸ್ಯರ ನಿಷ್ಕ್ರಿಯತೆ ಸಹ ಅಷ್ಟೇ ಖಂಡನೀಯ. ನೀವು ಆಡಿರುವ ಮಾತುಗಳಿಗೆ ಸದನದಲ್ಲಿ ಕ್ಷಮೆ ಕೇಳಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ನಿಮ್ಮಂತಹ ಅಸೂಕ್ಷ್ಮ ಮನಸ್ಸಿನ ಸಭಾಧ್ಯಕ್ಷರು ನಮ್ಮ ರಾಜ್ಯಕ್ಕೆ ಖಂಡಿತ ಬೇಡ ಎಂದು ತಿಳಿಸಿದ್ದಾರೆ.
Advertisement
ರಮೇಶಣ್ಣನ ಬಗಗೆ ನನಗೆ ತುಂಬಾ ಹೆಮ್ಮೆ ಇದ್ದು, ಸದನದಲ್ಲಿ ಅವರ ತಾಯಿಯನ್ನು ನೆನೆದು ಬಾವುಕರಾಗಿದ್ದ ರಮೇಶಣ್ಣ ಇಂದಿಗೂ ಮಹಿಳೆಯರನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ತಮ್ಮ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದು ಹೇಳಿಕೆ ನೀಡಿರುವುದು ನಮಗೆ ತುಂಬಾ ಬೇಸರ ಮೂಡಿಸಿದೆ. ನಿಮ್ಮಿಂದ ಇಂತಹ ಮಹಿಳಾ ವಿರೋಧಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಅಣ್ಣ ಎಂದು ಖೇದ ವ್ಯಕ್ತಪಡಿಸಿದ್ದಾರೆ.
Advertisement
50 ಕೋಟಿ ರೂ. ಸ್ಪೀಕರ್ ಅವರಿಗೆ ನೀಡಲಾಗಿದೆ ಎಂಬ ಆಡಿಯೋ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದ ರಮೇಶ್ ಕುಮಾರ್ ಅವರು ಭಾವುಕರಾಗಿದ್ದರು. ಅಲ್ಲದೇ ನನ್ನ ಕುಟುಂಬ, ಬೆಂಬಲಿಗರು, ಪತ್ನಿ, ಮಕ್ಕಳಿಗೆ ನನ್ನ ಮುಖ ಹೇಗೆ ತೋರಿಸುವುದು ಎಂದು ಸ್ಪೀಕರ್ ನುಡಿದ್ದರು. ಆದರೆ ಎರಡು ಪಕ್ಷಗಳ ನಾಯಕರು ಸ್ಪೀಕರ್ ಅವರಿಗೆ ಬೆಂಬಲ ನೀಡಿ ನಿಮ್ಮನ್ನು ಬೀದಿಗೆ ತಂದಿಟ್ಟವರು ಎಂದು ಪರಸ್ಪರ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸುವ ಸಂದರ್ಭದಲ್ಲಿ ರೇಪ್ ಸಂತ್ರಸ್ತೆಯ ಉದಾಹರಣೆ ನೀಡಿ ಸ್ಪೀಕರ್ ಅವರು ಚಾಟಿ ಬೀಸಿದ್ದರು.
“ನನಗೆ ಹೆಂಗಸರ ಬಗ್ಗೆ ಬಹಳ ಗೌರವ ಇದೆ. ಅವರನ್ನು ಎಂದೂ ಅಗೌರವದಿಂದ ನಡೆಸಿಕೊಂಡಿಲ್ಲ” ಇತ್ಯಾದಿ ಮಾತುಗಳನ್ನು ದಯವಿಟ್ಟು ಆಡಬೇಡಿ. ಅಂತಹ ಯಾವ ಸಮರ್ಥನೆಗಳೂ ಬೇಡ. ನೀವು ಆಡಿರುವ ಮಾತು ಹೊಣೆಗೇಡಿತನದ ಮಾತು ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವೆ ರಾಜಿನಾಮೆ ನೀಡಿ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv