ನಟಿ ಅಭಿನಯ ಅತ್ತಿಗೆ ಲಕ್ಷ್ಮಿದೇವಿ ಮನೆ ಮುಂದೆ ನಿನ್ನೆ ಹೈ ಡ್ರಾಮಾ ನಡೆದಿದೆ. ಲಕ್ಷ್ಮಿದೇವಿ ಅವರು ತಮಗೆ ಹಣ ಪಡೆದು ವಂಚಿಸಿದ್ದಾರೆ ಎಂದು ನಟಿ ಸೋನು ಗೌಡ ಅನ್ನುವವರು ಲಕ್ಷ್ಮಿದೇವಿ ಅವರ ಮನೆ ಮುಂದೆ ಬಂದು ಗಲಾಟೆ ಮಾಡಿದ ಪ್ರಸಂಗ ನಡೆದಿದೆ. ಅವಕಾಶ ಕೊಡಿಸುವುದಾಗಿ ತಮ್ಮಿಂದ 75 ಸಾವಿರ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಹಣ ಪಡೆದು ಈವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಸೋನು ಗೌಡ, ‘ಲಕ್ಷ್ಮಿದೇವಿ ಅವರು ಹಣ ಪಡೆದು ನನಗಷ್ಟೇ ಮೋಸ ಮಾಡಿಲ್ಲ. ಅನೇಕ ಹುಡುಗಿಯರಿಗೆ ಈ ರೀತಿ ಮೋಸ ಮಾಡಿದ್ದಾರೆ. ಹೆಣ್ಣುಮಕ್ಕಳನ್ನು ಬುಟ್ಟಿಗೆ ಹಾಕಿಕೊಂಡು ಹೀಗೆ ಹಣ ವಸೂಲಿ ಮಾಡುವ ಖಯಾಲಿ ಅವರದ್ದು. ತಾವು ಹಣ ಪಡೆದದ್ದಕ್ಕೆ ದಾಖಲೆ ಸಮೇತ ಅವರು ಲಕ್ಷ್ಮಿದೇವಿ ಅವರ ಮನೆ ಮುಂದೆ ಹಾಜರಿದ್ದರು. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ
ಸೋನು ಗೌಡ ಅವರು ಮನೆ ಮುಂದೆ ಬಂದ ಗಲಾಟೆ ಮಾಡುತ್ತಿದ್ದಂತೆಯೇ ಹಣವನ್ನು ಸೆಟಲ್ಮೆಂಟ್ ಮಾಡುವುದಾಗಿ ಲಕ್ಷ್ಮಿದೇವಿ ಅವರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸೋನು ಗೌಡ ಅವರ ಜೊತೆ ಫೋನ್ ನಲ್ಲಿ ಮಾತನಾಡಿದ ಲಕ್ಷ್ಮಿದೇವಿ ಅವರು ‘ನಾನು ಸದ್ಯ ಮನೆಯಲ್ಲಿ ಇಲ್ಲ. ಬಂದು ನಿಮ್ಮ ಹಣವನ್ನು ವಾಪಸ್ಸು ನೀಡುವುದಾಗಿ ಹೇಳಿದ್ದಾರೆ’ ಎಂದು ಸೋನು ಗೌಡ ತಿಳಿಸಿದರು.
ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಅಭಿನಯಗೆ ಮೊನ್ನೆಯಷ್ಟೇ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಭಿನಯ ಅವರ ಸಹೋದರನ ಪತ್ನಿ ಲಕ್ಷ್ಮಿದೇವಿ ಅವರು ಅಭಿನಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಅಭಿನಯ ಅವರಿಗೆ 2 ವರ್ಷ ಮತ್ತು ಅವರ ತಾಯಿಗೆ 5 ವರ್ಷ ಜೈಲು ಶಿಕ್ಷೆ ನೀಡಿದೆ. ಈ ಬೆನ್ನಲ್ಲೇ ಲಕ್ಷ್ಮಿದೇವಿ ಅವರ ಮೇಲೆ ಈ ರೀತಿ ಆರೋಪ ಬಂದಿದೆ.