ತಿರುವನಂತಪುರಂ: ಕನ್ನಡ ಸೇರಿ ಬಹುಭಾಷೆಗಳಲ್ಲಿ ನಟಿಸಿರುವ ಮಲಯಾಳಂ ಮೂಲದ ನಟಿಯೊಬ್ಬರ (Kerala Actress) ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದ ಆದೇಶ ಹೊರಬಿದ್ದಿದೆ. ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿ 6 ಮಂದಿ ಆರೋಪಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಕೇರಳ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.
ಇದೇ ಪ್ರಕರಣದಲ್ಲಿ ನಟ ದಿಲೀಪ್‌ರನ್ನ (Dilip) ಕೋರ್ಟ್ ಖುಲಾಸೆ ಮಾಡಿದೆ. ಪ್ರಕರಣ ಸಂಬಂಧ ಡಿಸೆಂಬರ್ 8 ರಂದು ತೀರ್ಪು ಪ್ರಕಟಿಸಿದ್ದ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ನ (Ernakulam District and Sessions Court) ನ್ಯಾಯಾಧೀಶರಾದ ಹನಿ ಎಂ. ವರ್ಗೀಸ್ (Honey M Varghese) ಅವರು ಪ್ರಕರಣದ ಇನ್ನೊಬ್ಬ ಆರೋಪಿ ಮಲಯಾಳಂ ನಟ ದಿಲೀಪ್‌ರನ್ನ ಅವರನ್ನ ಖುಲಾಸೆಗೊಳಿಸಿದ್ದರು.

ಪ್ರಕರಣದ ಉಳಿದ ಆರೋಪಿಗಳಾದ ಸುನಿಲ್ ಎನ್.ಎಸ್ ಅಲಿಯಾಸ್ ಪಲ್ಸರ್ ಸುನಿ (Pulsar Suni), ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೀಶ್ ವಿಪಿ, ಸಲೀಂ ಎಚ್ ಅಕಾ ವಡಿವಲ್ ಸಲೀಂ ಹಾಗೂ ಪ್ರದೀಪ್ ಅವರನ್ನು ದೋಷಿಗಳೆಂದು ಪರಿಗಣಿಸಿ ಸಾಮೂಹಿಕ ಅತ್ಯಾಚಾರ ಕೃತ್ಯಕ್ಕಾಗಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಇದರೊಂದಿಗೆ ಎಲ್ಲಾ ಅಪರಾಧಿಗಳೂ 20 ಸಾವಿರ ರೂ. ದಂಡ ಕಟ್ಟಬೇಕು ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿ ಎನ್.ಎಸ್. ಸುನಿಲ್ (ಪಲ್ಸರ್ ಸುನಿ). ಎರಡನೇ ಆರೋಪಿ ಮಾರ್ಟಿನ್ ಆಂಟೋನಿ, ಮೂರನೇ ಆರೋಪಿ ಬಿ. ಮಣಿಕಂದನ್, 4ನೇ ಆರೋಪಿ ವಿ.ಪಿ. ವಿಜೀಶ್, ಐದನೇ ಆರೋಪಿ ಎಚ್. ಸಲೀಂ, ಮತ್ತು ಆರನೇ ಆರೋಪಿ ಪ್ರದೀಪ್, 50 ಸಾವಿರ ರೂಪಾಯಿ ದಂಡ ಪಾವತಿಸದಿದ್ದರೆ, ಅವರು ಇನ್ನೂ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ದಂಡದ ಮೊತ್ತದಿಂದ ಸಂತ್ರಸ್ಥೆಗೆ 5 ಲಕ್ಷ ರೂ.ಗಳನ್ನು ನೀಡಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಮೊದಲ ಆರೋಪಿ ಸುನಿಲ್‌ಗೆ ಐಟಿ ಕಾಯ್ದೆಯಡಿ ಹೆಚ್ಚುವರಿಯಾಗಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆದಾಗ್ಯೂ, 20 ವರ್ಷಗಳ ಕಠಿಣ ಜೈಲು ಶಿಕ್ಷೆಯ ಜೊತೆಗೆ ಇದನ್ನು ಅನುಭವಿಸಬೇಕಾಗುತ್ತದೆ. ಎಲ್ಲಾ ಆರೋಪಿಗಳನ್ನು ವಿಯ್ಯೂರು ಜೈಲಿಗೆ ಕಳುಹಿಸಲಾಗುವುದು. ಜೈಲು ಬದಲಾಯಿಸಲು ಬಯಸಿದರೆ, ಅವರು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಆರೋಪಿಗಳ ರಿಮಾಂಡ್ ಅವಧಿಯನ್ನೂ ಕಡಿಮೆ ಮಾಡಲಾಗಿದೆ.

ಪಲ್ಸರ್ ಸುನಿ ಶಕ್ಷೆ ತಗ್ಗಿಸುವಂತೆ ಮನವಿ
ಇನ್ನೂ ತನ್ನ ವೃದ್ಧ ತಾಯಿಯ ಪಾಲನೆಗೆ ಇರೋದು ತಾನೊಬ್ಬನೇ ಎಂದು ಪಲ್ಸರ್ ಸುನಿ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ಕೋರಿದರು. ಮತ್ತೊಬ್ಬ ಆರೋಪಿ ಆಂಟನಿ ವಾದ ಮಂಡಿಸಿ ಅಪರಾಧದಲ್ಲಿ ತನ್ನ ಪಾತ್ರ ಇಲ್ಲವಾದರೂ ಈಗಾಗಲೇ ಹಲವು ವರ್ಷಗಳನ್ನ ಜೈಲಿನಲ್ಲಿ ಕಳೆದಿದ್ದೇನೆ. ಹೆತ್ತವರು ತನ್ನ ಮೇಲೆ ಅವಲಂಬಿತರಾಗಿದ್ದಾರೆ ಎಂದ. ಮಣಿಕಂಠನ್ ಕೂಡ ಇದೇ ರೀತಿಯ ಮನವಿ ಮಾಡಿದ. ವಿಜೇತ್ ತನ್ನ ಊರಿನ ಸಮೀಪದ ಜೈಲಿಗೆ ಕಳಿಸುವಂತೆ ವಿನಂತಿಸಿದ. ವಡಿವಲ್ ಸಲೀಂ ಮತ್ತು ಪ್ರದೀಪ್ ತಾವು ನಿರಪರಾಧಿಗಳು ಎಂದು ವಾದಿಸಿದರು.
ಆದರೆ ಆರೋಪಿಗಳ ವಾದವನ್ನ ಬಲವಾಗಿ ವಿರೋಧಿಸಿದ ಎಸ್‌ಪಿಪಿ (ಸರ್ಕಾರಿ ವಿಶೇಷ ಅಭಿಯೋಜಕ) ಅಜಕುಮಾರ್, ಸಮಾಜ ಇಂತಹ ಅಪರಾಧಗಳನ್ನ ಸಹಿಸದು ಎಂಬ ಸಂದೇಶವನ್ನ ಶಿಕ್ಷೆ ಸಾರಬೇಕು. ಎಲ್ಲಾ 6 ಜನರಿಗೆ ಅವರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.
ಪಿತೂರಿಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಅಪರಾಧಗಳಿಗೆ ಸಮಾನವಾಗಿ ಹೊಣೆಗಾರರಾಗಿದ್ದರೂ, ಸುನಿ ಮಾತ್ರ ನಿಜವಾಗಿಯೂ ಅತ್ಯಾಚಾರ ಎಸಗಿದ್ದಾನೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಬಹುದು ಎಂದು ನ್ಯಾಯಾಧೀಶೆ ಹನಿ ಅವರು ಮೌಖಿಕವಾಗಿ ಹೇಳಿದರು.

