– ಮನೆಯಿಂದ ಹೊರ ಬರದಿದ್ದಾಗ ನೆರೆಹೊರೆಯವರಿಂದ ಮಾಹಿತಿ
ಹೈದರಾಬಾದ್: ಅನುಮಾನಸ್ಪದ ರೀತಿಯಲ್ಲಿ ತೆಲುಗಿನ ಕಿರುತೆರೆ ನಟಿಯೊಬ್ಬರ ಮೃತದೇಹ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಯೆಲ್ಲರೆಡ್ಡಿಗುಡ ಪ್ರದೇಶದಲ್ಲಿ ಕಂಡು ಬಂದಿದೆ.
ವಿ.ಶಾಂತಿ (32) ಮೃತ ನಟಿ. ಗುರುವಾರ ಬೆಳಗ್ಗೆ ಯೆಲ್ಲರೆಡ್ಡಿಗುಡದ ಎಂಜಿನಿಯರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿರುವ ತನ್ನ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ವಿ.ಶಾಂತಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬಂದಿಲ್ಲ. ಇದರಿಂದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಎಸ್.ಆರ್.ನಗರ ಪೊಲೀಸರು ಸ್ಥಳಕ್ಕೆ ಬಂದು ಅಪಾರ್ಟ್‌ಮೆಂಟ್ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಬೆಡ್ ಮೇಲೆ ಶಾಂತಿಯ ಮೃತದೇಹ ಪತ್ತೆಯಾಗಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ಶಾಂತಿ ವಿಶಾಖಪಟ್ಟಣಂ ಮೂಲದವರಾಗಿದ್ದು, ತೆಲುಗಿನ ಅನೇಕ ಸೀರಿಯಲ್‍ಗಳಲ್ಲಿ ಕೆಲವು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ನಟಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಕುಡಿದ ಮತ್ತಿನಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಆದರೆ ನಟಿಯ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ನಟಿಯ ಮರಣೋತ್ತರ ಪರೀಕ್ಷೆಯ ವರದಿಯಿಂದ ಮಾತ್ರ ತಿಳಿಯಬೇಕಿದೆ.