ಅತ್ತಿಗೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಅಭಿನಯಗೆ ನಿನ್ನೆಯಷ್ಟೇ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಭಿನಯ ಅವರ ಸಹೋದರನ ಪತ್ನಿ ಲಕ್ಷ್ಮಿದೇವಿ ಅನ್ನುವವರು ಅಭಿನಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಅಭಿನಯ ಅವರಿಗೆ 2 ವರ್ಷ ಮತ್ತು ಅವರ ತಾಯಿಗೆ 5 ವರ್ಷ ಜೈಲು ಶಿಕ್ಷೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಭಿನಯ, ‘ಇದು ಇಪ್ಪತ್ತು ವರ್ಷದ ಕೇಸು. ಕಳೆದ ಬಾರಿ ತೀರ್ಪು ನಮ್ಮಂತೆ ಆಗಿತ್ತು. ಇದೀಗ ಅವರಂತೆ ಆಗಿದೆ. ನಾವು ಕಾನೂನು ಸಮರವನ್ನು ಮುಂದುವರೆಸುತ್ತೇವೆ. ಲಕ್ಷ್ಮಿದೇವಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಾನೂನು ಹೋರಾಟ ಮುಂದುವರೆಯುತ್ತದೆ, ಮುಂದೇನಾಗತ್ತೋ ನೋಡೋಣ’ ಎಂದಿದ್ದಾರೆ. ಅತ್ತಿಗೆ ಮಾಡಿರುವ ಎಲ್ಲ ಆರೋಪಗಳನ್ನೂ ಈ ಸಂದರ್ಭದಲ್ಲಿ ಅವರು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್ ಆನಂದ್ರಾಮ್
ಏನಿದು ಪ್ರಕರಣ? : ನಟಿ ಅಭಿನಯ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದರು ಎನ್ನುವ ಕಾರಣಕ್ಕಾಗಿ ವರದಕ್ಷಿಣೆ ಕಿರುಕುಳ ಕೇಸಲ್ಲಿ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ 2002 ರಲ್ಲಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಭಿನಯ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು. 1998 ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆ ವೇಳೆ ಶ್ರೀನಿವಾಸ್ ಅವರು 80 ಸಾವಿರ ನಗದು, 250 ಗ್ರಾಂ ಚಿನ್ನಭರಣ ಪಡೆದಿದ್ದರು ಎಂದು ಹೇಳಲಾಗಿತ್ತು. ನಂತರ ಮತ್ತೆ ಒಂದು ಲಕ್ಷ ಹಣ ತರುವಂತೆ ಅಭಿನಯ ಕುಟುಂಬಸ್ಥರಿಂದ ಕಿರುಕುಳ ನೀಡಲಾಗಿತ್ತು ಎಂದು ದೂರು ದಾಖಲಾಗಿತ್ತು.
ಹಣದ ಬೇಡಿಕೆ ಇಟ್ಟಿದ್ದ ಅಭಿನಯ ಕುಟುಂಬವು ಲಕ್ಷ್ಮೀದೇವಿಗೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಲಕ್ಷ್ಮಿದೇವಿ ದೂರು ನೀಡಿದ್ದರು. ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಲಕ್ಷ್ಮೀದೇವಿ. ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದಾರೆ. ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ ಅದೇಶ.