ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್ ನಟಿ ಸೌಂದರ್ಯ ಅವರು 90ರ ದಶಕದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆ. ಅಪಾರ ಅಭಿಮಾನಿಗಳ ನೆಚ್ಚಿನ ನಟಿಯಾಗಿರುವ ಸೌಂದರ್ಯ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು. ಆಕೆಯ ಸಾವು ಕುಟುಂಬದವರಿಗೆ, ಆಪ್ತರಿಗೆ ಶಾಕ್ ನೀಡಿತ್ತು. ಇದೀಗ ಸ್ನೇಹಿತೆ ಸೌಂದರ್ಯ ಬಗ್ಗೆ ಪ್ರೇಮಾ ಭಾವುಕರಾಗಿದ್ದಾರೆ.
1992ರಲ್ಲಿ ‘ಗಂಧರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸೌಂದರ್ಯ ಅವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ನಿಧನರಾದರು. ಇದೀಗ ಸೌಂದರ್ಯ ಅವರನ್ನು ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಸ್ಮರಿಸಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್
ಸೌಂದರ್ಯ- ಪ್ರೇಮಾ ಇಬ್ಬರೂ ಆತ್ಮೀಯ ಸ್ನೇಹಿತೆಯರಾಗಿದ್ದರು. ಸೌಂದರ್ಯ ಜೊತೆ ಪ್ರೇಮಾ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ- ತೆಲುಗು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಾನು ನನ್ನ ಹೆಂಡ್ತೀರು, ಆಪ್ತಮಿತ್ರ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ನಮ್ಮ ನಡುವೆ ಒಡನಾಟ ಬೆಳೆಯಿತು. ರಾಮ ನವಮಿ ಬಂತು ಅಂದರೆ, ಎಲ್ಲರಿಗೂ ಪಾನಕ ಕುಡಿಸುತ್ತಿದ್ದರು. ಅಲ್ಲದೆ ಸೌಂದರ್ಯದ ವಿಚಾರದಲ್ಲಂತೂ ತುಂಬಾನೇ ಕಾಳಜಿ ವಹಿಸುತ್ತಿದ್ದರು. ಆಹಾರವನ್ನೂ ಮಿತವಾಗಿ ಬಳಸುತ್ತಿದ್ದರು. ಸೌಂದರ್ಯಾ ನಟನೆ ಕೂಡ ತುಂಬಾನೇ ಸಹಜವಾಗಿತ್ತು. ಕಣ್ಣಿನಿಂದಲೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ಪ್ರೇಮಾ ಹೇಳಿಕೊಂಡಿದ್ದಾರೆ.
2004ರಲ್ಲಿ ಸೌಂದರ್ಯ ಚುನಾವಣ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಸೌಂದರ್ಯ ಸಹೋದರ ಅಮರ್‌ನಾಥ್ ಅವರೊಂದಿಗೆ ಪ್ರಚಾರಕ್ಕೆ ಮುಂದಾಗಿದ್ದರು. ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿತ್ತು. ಈ ಅಪಘಾತದಲ್ಲಿ ಸೌಂದರ್ಯಾ ಜೊತೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದ್ದರು. ಆ ದಿನವನ್ನು ನೆನೆದು ಪ್ರೇಮಾ ಭಾವುಕರಾಗಿದ್ದಾರೆ.
ಆ ದಿನ ನಾನು ಸೌಂದರ್ಯ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯ ಅವರ ಶವವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು. ಅದರಲ್ಲಿ ಆಕೆಯ ಶವವಿತ್ತು. ಆದರೆ, ಮುಖದ ಗುರುತೇ ಸಿಗಲಿಲ್ಲ. ಅದನ್ನು ನೋಡಿ ಬೆಚ್ಚಿಬಿದ್ದಿದ್ದೆ. ಆ ವೇಳೆ ಕಲಾವಿದರ ಜೀವನ ಇಷ್ಟೇನಾ ಅಂತ ಅನಿಸಿತ್ತು ಎಂದು ಸೌಂದರ್ಯ ಅವರನ್ನು ನೆನೆದು ಪ್ರೇಮಾ ಭಾವುಕರಾಗಿದ್ದಾರೆ.