‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಮಲೈಕಾ ವಸುಪಾಲ್. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದ ಅವರು ಇದೀಗ ಡಾಲಿ ಧನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರದ ಮೂಲಕ ಎರಡನೇ ಬಾರಿ ನಾಯಕಿಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಈ ಬಾರಿ ಮತ್ತೊಂದು ತೆರನಾದ ಚೆಂದದ ಪಾತ್ರ ಸಿಕ್ಕ ಖುಷಿಯೂ ಮಲೈಕಾರಲ್ಲಿದೆ. ಮೊದಲ ಹೆಜ್ಜೆಯಲ್ಲಿಯೇ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಳ್ಳುವ ಭರವಸೆ ಮೂಡಿಸಿಕೊಂಡಿದ್ದ ಮಲೈಕಾ, ಆ ನಂತರದಲ್ಲಿ ಭಿನ್ನ ಬಗೆಯ ಪಾತ್ರಕ್ಕಾಗಿ ಅನ್ವೇಷಣೆ ಆರಂಭಿಸಿದ್ದರು. ಆ ಹಾದಿಯಲ್ಲಿ ಅನೇಕ ಕಥೆಗಳೂ ಕೂಡಾ ಅವರನ್ನು ಅರಸಿ ಬಂದಿತ್ತು. ಅದೆಲ್ಲದರ ನಡುವೆ, ವರ್ಷದ ಹಿಂದೆ ಬಹುವಾಗಿ ಕಾಡಿದ್ದದ್ದು ‘ವಿದ್ಯಾಪತಿ’ (Vidyapati) ಚಿತ್ರದ ಪಾತ್ರ. ಆ ಕಾರಣದಿಂದಲೇ ಒಪ್ಪಿ ನಟಿಸಿರುವ ಮಲೈಕಾಗೀಗ (Malaika Vasupal) ಒಂದೊಳ್ಳೆ ಸಿನಿಮಾದ ಭಾಗವಾದ ತೃಪ್ತಿ ದೊರಕಿದೆ. ಇದನ್ನೂ ಓದಿ: ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!
‘ಹಿಟ್ಲರ್ ಕಲ್ಯಾಣ’ ಎಂಬ ಧಾರಾವಾಹಿಯ ಲವಲವಿಕೆಯ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದವರು ಮಲೈಕಾ. ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಮಿಂಚಿದ್ದ ಈಕೆ ನಾಯಕಿಯಾಗಿ ಮಿಂಚುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದದ್ದು ನಿಜ. ಇಂಥಾ ಮಲೈಕಾ ವಿದ್ಯಾಪತಿ ಚಿತ್ರದ ನಾಯಕಿಯಾಗಬೇಕೆಂದು ಆರಂಭದಲ್ಲಿಯೇ ಚಿತ್ರತಂಡ ನಿರ್ಧರಿಸಿತ್ತಂತೆ. ಈ ಕುರಿತಾಗಿ ಕರೆ ಬಂದಾಗ ಆರಂಭಿಕವಾಗಿ ಮಲೈಕಾ ಒಪ್ಪಿಕೊಳ್ಳಲು ಕಾರಣವಾದದ್ದು ಅದು ಡಾಲಿ ನಿರ್ಮಾಣ ಮಾಡುತ್ತಿರೋ ಸಿನಿಮಾ ಅನ್ನೋದು. ಆ ನಂತರ ಒಂದಿಡೀ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿದಾಗ ಮಲೈಕಾ ಅಕ್ಷರಶಃ ಥ್ರಿಲ್ ಆಗಿದ್ದರಂತೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?
ಇಲ್ಲಿ ಅವರು ಸೂಪರ್ ಸ್ಟಾರ್ ನಟಿ ವಿದ್ಯಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ ಪಾತ್ರದ ಒಂದಷ್ಟು ಝಲಕ್ಕುಗಳು ಟ್ರೈಲರ್ ಮೂಲಕ ಅನಾವರಣಗೊಂಡಿವೆ. ಹಾಗಂತ ಅದರ ಚಹರೆ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಲೈಕಾ ಪಾತ್ರದ ಮತ್ತೊಂದಷ್ಟು ರಹಸ್ಯಗಳು ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಇದೀಗ ಪ್ರತಿಭಾನ್ವಿತರ ತಂಡದೊಂದಿಗೆ, ಒಂದೊಳ್ಳೆ ಪಾತ್ರ ನಿರ್ವಹಿಸಿರುವ ಖುಷಿ ಹೊಂದಿರುವ ಮಲೈಕಾಗೆ, ವಿದ್ಯಾಪತಿ ಚಿತ್ರ ತನ್ನ ವೃತ್ತಿ ಬದುಕಿನ ದಿಕ್ಕುದೆಸೆ ಬದಲಿಸುತ್ತದೆಂಬ ಗಾಢ ನಂಬಿಕೆಯಿದೆ. ಈಗಾಗಲೇ ಅವರ ಪಾತ್ರದ ಬಗ್ಗೆ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಈ ಬಾರಿ ನಾಗಭೂಷಣ್ ಮತ್ತು ಮಲೈಕಾ ಜೋಡಿ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಕಾಣಿಸಲಾರಂಭಿಸಿವೆ.
ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಅಂತಾದ್ದೊಂದು ಅಕ್ಕರಾಸ್ಥೆಯಿಂದಲೇ ವಿದ್ಯಾಪತಿ ಚಿತ್ರವನ್ನವರು ನಿರ್ಮಾಣ ಮಾಡಿದ್ದಾರೆ. ಇಂದು (ಏ.10) ಸಿನಿಮಾ ರಿಲೀಸ್ ಆಗಿದೆ.