ಕಳೆದ ತಿಂಗಳು ಡಿಸೆಂಬರ್ 9 ರಂದು ಅಗಲಿದ ಕನ್ನಡದ ಹೆಸರಾಂತ ಹಿರಿಯ ನಟಿ ಲೀಲಾವತಿ (Leelavati) ಅವರ ಒಂದು ತಿಂಗಳ ತಿಥಿ ಕಾರ್ಯವನ್ನು ಇಂದು ಅವರ ಸೋಲದೇವನಹಳ್ಳಿ ಮನೆಯಲ್ಲಿ ನೆರವೇರಿಸಲಾಯಿತು. ನಟಿ ಇಷ್ಟದ ಅಡುಗೆ ಮಾಡಿ, ಪೂಜೆ ಸಲ್ಲಿಸುವುದರ ಮೂಲಕ ಒಂದು ತಿಂಗಳ ಕಾರ್ಯವನ್ನು ಪುತ್ರ ವಿನೋದ್ ರಾಜ್ (Vinod Raj) ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ (Soladevanahalli) ತೋಟದ ಮನೆಯಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಅವರಿಗೆ ಇಷ್ಟವಾದ ಸೀರೆ, ಬಳೆ, ಇನ್ನಿತರ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಲೀಲಾವತಿ ಅವರಿಗೆ ಹಾಡುಗಳೆಂದರೆ ಇಷ್ಟ. ಹಾಗಾಗಿ ಪುತ್ರ ವಿನೋದ್ ರಾಜ್ ಹಾಡಿನ ಮೂಲಕ ತಾಯಿಯನ್ನು ನೆನೆದಿದ್ದಾರೆ.
ಲೀಲಾವತಿ ಅವರ ಫೋಟೋದ ಮುಂದೆ ಅವರ ಪ್ರೀತಿಯ ಶ್ವಾನ ಬ್ಲಾಕಿ ಕೂಡ ಕೂತು ನಮನ ಸಲ್ಲಿಸಿದೆ. ವಿನೋದ್ ರಾಜ್ ಹಾಡುತ್ತಾ ಭಾವುಕರಾದಾಗ, ಬ್ಲಾಕಿ ಕೂಡ ರೋಧಿಸಿದೆ. ಈ ಕಾರ್ಯದಲ್ಲಿ ಊರಿನ ಜನತೆ ಹಾಗೂ ಲೀಲಾವತಿ ಅವರ ಆಪ್ತರು ಭಾಗಿಯಾಗಿದ್ದರು.