`ಸುಂಟರಗಾಳಿ’ ಸಿನಿಮಾದ `ಸಾರಾಯಿ ಶಾರದೆ’ ಖ್ಯಾತಿಯ ಪೋಷಕನಟಿ ಲಲಿತಮ್ಮ ನಿಧನರಾಗಿದ್ದಾರೆ.
ಲಲಿತಮ್ಮನವರಿಗೆ 65 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರಿಗೆ ಸ್ಟ್ರೋಕ್ ಆಗಿತ್ತು. ಕಳೆದ ಕೆಲ ದಿನಗಳಿಂದ `ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಅವರ ಆರೈಕೆ ಮಾಡಲಾಗುತ್ತಿತ್ತು.
ಜಂಗ್ಲಿ, ಲೈಫ್ ಇಷ್ಟೇನೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಲಲಿತಮ್ಮ ಅಭಿನಯಿಸಿದ್ದರು. ಇಂದು ಬೆಳಿಗ್ಗೆ 9:30ರ ಸುಮಾರಿಗೆ ಲಲಿತಮ್ಮ ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆ ಸಲ್ಲಿಸಿದ್ದಾರೆ. ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಬಳಿಕ ಕಿರುತೆರೆ ಹಾಗೂ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದಾರರು.
ಲಲಿತಮ್ಮ ರಂಗೋಲಿ, ಮಾಂಗಲ್ಯ, ಮಹಾಮಾಯಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಹಾಗೂ ಸುಂಟರಗಾಳಿ, ಜಾಕಿ, ವಜ್ರಕಾಯ, ಜಂಗ್ಲಿ ಕಿತ್ತೂರು, ಪುತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅವಿಸ್ಮರಣೀಯ ಸಾರಾಯಿ ಶಾರದೆ:
ದರ್ಶನ್ ಅಭಿನಯದ `ಸುಂಟರಗಾಳಿ’ ಸಿನಿಮಾದಲ್ಲಿ ಅವರು ಮಾಡಿದ್ದ `ಸಾರಾಯಿ ಶಾರದೆ’ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಪಾತ್ರದ ಬಳಿಕ ಲಲಿತಾ ಅವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದ್ದು, ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಲವು ಅವಕಾಶಗಳು ಒಲಿದು ಬಂದವು.

