ಬೆಂಗಳೂರು: ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾರಂಗದಲ್ಲಿ ‘ಮಿ ಟೂ’ ಅಭಿಯಾನ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಆಂದೋಲನಕ್ಕೆ ನಟಿ ಖುಷ್ಬೂ ಬೆಂಬಲಿಸಿದ್ದು, ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ನಟಿ ಖುಷ್ಬೂ ಅವರು, “ನನ್ನ 40 ವರ್ಷಗಳ ಸಿನಿಮಾ ಜೀವನದಲ್ಲಿ ಅಂತಹ ಸಂದರ್ಭ ಎದುರಾಗಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಖುಷ್ಬು ಟ್ವೀಟ್ ಮಾಡಿದ ತಕ್ಷಣ ಅನೇಕರು ರೀಟ್ವೀಟ್ ಮಾಡಿದ್ದಾರೆ.
ಆದರೆ ಅವರಲ್ಲಿ ಲಕ್ಷ್ಮೀ ಎಂಬವರು ನಟ ರವಿಚಂದ್ರನ್ ಹೆಸರು ಹೇಳಿ, “ನೀವು ಸುಳ್ಳು ಹೇಳುತ್ತಿದ್ದೀರಾ ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರು ಎಂದು ನಾನು ಊಹಿಸಬಲ್ಲೆ” ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಖುಷ್ಬೂ “ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೇ ಪಬ್ಲಿಸಿಟಿಗಾಗಿ ಏನೇನೊ ಮಾತಾಡಬೇಡಿ. ನೀವು ಸಂತ್ರಸ್ತೆ ಅಲ್ಲ, ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲದೇ ಈ ರೀತಿ ಮಾತಾಡುವು ತಪ್ಪು. ರವಿಚಂದ್ರನ್ ಎಂತಹವರು ಅಂತ ನನಗೆ ಗೊತ್ತು. ಇಂದು ನಮ್ಮ ತಾಯಿ ಬದುಕಿದರೆ ಅದಕ್ಕೆ ಅವರೇ ಕಾರಣ. ರವಿಚಂದ್ರನ್, ಅವರ ತಂದೆ ಎನ್. ವೀರಾಸ್ವಾಮಿ ಬಗ್ಗೆ ನಿನಗೆ ಗೊತ್ತಾ? ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ದರು. ಅಂತಹವರ ಕುರಿತು ಬಾಯಿಗೆ ಬಂದಂತೆ ಮಾತಾಡಬೇಡ” ಅಂತ ಖುಷ್ಬೂ ಗರಂ ಆಗಿ ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಟಿ ಖುಷ್ಬೂ ಸ್ಯಾಂಡಲ್‍ವುಡ್ ನಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದಾರೆ. ರಣಧೀರ, ಅಂಜದ ಗಂಡು ಸೇರಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv