ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟಿ, ಒಂದೇ ಒಂದು ವಿವಾದವಿಲ್ಲದೇ ಸ್ಟಾರ್ ನಟಿಯಾಗಿ ಬೆಳೆದಿರುವ ಅದಿತಿ ಪ್ರಭುದೇವ ಅವರ ವಿವಾಹ ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇಂದು ಅರಿಶಿನ ಶಾಸ್ತ್ರ ನಡೆಯುತ್ತಿದ್ದು, ಆ ಫೋಟೋಗಳನ್ನು ಅದಿತಿ ಪ್ರಭುದೇವ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಉದ್ಯಮಿ ಯಶಸ್ ಅವರ ಜೊತೆ ಹೊಸ ಜೀವನಕ್ಕೆ ಅದಿತಿ ಕಾಲಿಡುತ್ತಿದ್ದು, ಈಗಾಗಲೇ ತಮ್ಮ ಭಾವಿ ಪತಿಯನ್ನು ಅಭಿಮಾನಿಗಳಿಗೆ ಹಲವಾರು ಬಾರಿ ಪರಿಚಯಿಸಿದ್ದಾರೆ. ಒಂದು ದಿನ ತಮ್ಮ ಯಶಸ್ವಿ ಜೊತೆ ಕಾಡಿನಲ್ಲಿ ಕಳೆದ ಅನುಭವವನ್ನೂ ಅವರು ಹಂಚಿಕೊಂಡಿದ್ದರು. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್
ತಾವು ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರೂ, ಅದಿತಿ ಮಾತ್ರ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದು ಉದ್ಯಮ ಕ್ಷೇತ್ರದವರನ್ನು ಯಶಸ್ ಉದ್ಯಮಿಯಾಗಿದ್ದು, ಕಾಫಿ ಪ್ಲಾಂಟರ್ ಕೂಡ ಆಗಿದ್ದಾರೆ. ಇಂತಹ ಹುಡುಗನನ್ನು ಪಡೆಯುವುದಕ್ಕಾಗಿಯೇ ನಾನು ಇಷ್ಟು ದಿನ ಕಾದಿದ್ದೆ ಎಂದೂ ಅವರು ಹುಡುಗನ ಬಗ್ಗೆ ಬರೆದುಕೊಂಡಿದ್ದರು.
ಈಗಾಗಲೇ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ಚಿತ್ರೋದ್ಯಮದ ಅನೇಕರಿಗೆ ನೀಡಿದ್ದು, ನಾಳೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಅದಿತಿ ಪ್ರಭುದೇವ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ತಿಂಗಳು ಅದಿತಿ ಅವರ ಎರಡು ಚಿತ್ರಗಳು ರಿಲೀಸ್ ಆಗಿದ್ದು, ಇವರ ಪಾತ್ರಕ್ಕೆ ಮೆಚ್ಚುಗೆಯ ಮಾತೂ ಕೇಳಿ ಬಂದಿದೆ.
ಮದುವೆಯ ನಂತರ ಅದಿತಿ ಸಿನಿಮಾ ರಂಗದಲ್ಲೇ ಮುಂದುವರೆಯುತ್ತಾರಾ ಅಥವಾ ಸಿನಿಮಾ ರಂಗದಿಂದ ದೂರವಾಗುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದ್ದು, ಮುಂದಿನ ದಿನಗಳಲ್ಲಿ ಅದಿತಿ ಅವರೇ ಇದಕ್ಕೆ ಉತ್ತರವನ್ನೂ ನೀಡಲಿದ್ದಾರೆ. ಬಹುಶಃ ಸಿನಿಮಾ ರಂಗವನ್ನು ತೊರೆಯುವುದಿಲ್ಲ ಎಂದು ಹೇಳಲಾಗುತ್ತಿದೆ.