ಬೆಂಗಳೂರು: ನಟ ಯುವರಾಜ್ ಕುಮಾರ್ ಅವರು ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದಂತೆ ತಮ್ಮ ಫೇಸ್‍ಬುಕ್‍ನಲ್ಲಿ ಒಂದು ಸುದೀರ್ಘವಾದ ಪೋಸ್ಟ್ ಮಾಡಿದ್ದಾರೆ. ಇದೀಗ ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದ ರಾಜ್ಯದ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬಿದ್ದಿದೆ. ಪ್ರವಾಹ ಸಂತ್ರಸ್ತರಿಗೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಆದರೆ ಹೊರಗಿನ ಸೆಲೆಬ್ರಿಟಿಗಳು, ಸ್ಟಾರ್‌ಗಳು ಯಾರು ಬಂದಿಲ್ಲ ಎಂದು ಯುವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೇಸ್‍ಬುಕ್ ಪೋಸ್ಟ್?
ಒಂದು ಆಲೋಚನೆ – ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದಾರೆ. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ, ಆಹಾರವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ನಾವು ಕನ್ನಡಿಗರು, ಇಲ್ಲಿನ ಸಂಘ ಸಂಸ್ಥೆಗಳು, ಸೇನಾ ದಳಗಳು ಹಾಗೂ ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಆದರೆ, ಎಲ್ಲಾ ಹೊರಗಿನ ಸೆಲೆಬ್ರಿಟಿಗಳು, ಸ್ಟಾರ್‌ಗಳು, ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು, ತಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು, ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ. ಆದರೆ ಈಗ ಅವರೆಲ್ಲಾ ಎಲ್ಲಿದ್ದಾರೆ? ಇಲ್ಲಿ ಬರೋದು, ಸಹಾಯ ಮಾಡೋದು ಇರಲಿ, ನನಗೆ ಯಾರ ಟ್ವೀಟ್, ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ. ಅಂದಹಾಗೆ ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಮ್ಮ ಕೋಟಿ ವಂದನೆಗಳು, ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ನಂತರ ತಪ್ಪಿದ್ದರೆ ಕ್ಷಮೆ ಇರಲಿ. ಯಾರೇ ಬರಲಿ ಬಿಡಲಿ ನಮ್ಮವರ ಜತೆ, ಎಲ್ಲರ ಜೊತೆ ನಾವು ಇರೋಣ ಎಂದು ಕರೆ ನೀಡಿದ್ದಾರೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಈ ಹಿಂದೆ ತಮಿಳುನಾಡು ಮತ್ತು ಕೇರಳದಲ್ಲಿ ಪ್ರವಾಹ ಉಂಟಾದಾಗ ಕರ್ನಾಟಕದಿಂದ ಸಾಕಷ್ಟು ಮಂದಿ ನೆರವಿಗೆ ಹೋಗಿದ್ದರು. ಇದೀಗ ಯುವರಾಜ್ ಕುಮಾರ್ ಮಾಡಿರುವ ಪೋಸ್ಟ್ ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.