ನಟ, ರಂಗ ನಿರ್ದೇಶಕ ಯಶವಂತ್ ಸರದೇಶಪಾಂಡೆ (55) (Yashwant Sardeshpande) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಇಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ (Kannada theatre) ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ʻಆಲ್ ದಿ ಬೆಸ್ಟ್ʼ ನಾಟಕ ಅಭೂತಪೂರ್ವ ಯಶಸ್ಸು ಕಂಡಿತ್ತು. ಈಗ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ.
ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಯಶವಂತ ಸರದೇಶಪಾಂಡೆಯವರು 1965ರ ಜೂ.13ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ.
ರಂಗಕರ್ಮಿ ನಿಧನಕ್ಕೆ ಶಿವರಾಜ ತಂಗಡಗಿ ಶೋಕ
ಹಿರಿಯ ರಂಗಕರ್ಮಿ ಯಶವಂತ ಸರದಶಪಾಂಡೆ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ರಂಗಭೂಮಿಯ ಜೊತೆ ಸಿನಿಮಾ ಮತ್ತು ಟಿವಿ ಧಾರವಾಹಿಗಳಲ್ಲಿಯ ನಟನೆಯಿಂದ ಅಪಾರ ಹೆಸರು ಮಾಡಿರುವ ಯಶವಂತ ಸರದೇಶಪಾಂಡೆ ಸಮಕಾಲೀನ ಹಾಸ್ಯ ಕಲಾವಿದರ ಪಾಲಿನಲ್ಲಿ ತಮ್ಮ ವಿಶಿಷ್ಟ ಭಾಷೆ, ಆಂಗಿಕ ಅಭಿನಯದಿಂದ ಅಪಾರ ಜನಪ್ರಿಯತೆ ಪಡೆದಿದ್ದರು. ರಂಗ ವರ್ತುಲ ತಂಡವನ್ನು ಕಟ್ಟಿ, ಆ ಮೂಲಕ ಅಸಂಖ್ಯಾತ ನಾಟಕಗಳನ್ನ ಪ್ರದರ್ಶಿಸಿದ ಯಶವಂತ ಸರದೇಶಪಾಂಡೆ ಅವರ ಆಲ್ ದಿ ಬೆಸ್ಟ್ ನಾಟಕ ದಾಖಲೆಯ ಪ್ರದರ್ಶನಗಳನ್ನ ಕಂಡಿದೆ. ಕಮಲ ಹಾಸನ್ ಅಭಿನಯದ ರಾಮ ಶಾಮ ಭಾಮ ಜನಪ್ರಿಯ ಚಲನಚಿತ್ರದ ಸಂಭಾಷಣಕಾರರಾಗಿ,ಜೊತೆಗೆ ನಟಿಸಿ ,ಅಪಾರ ಜನಪ್ರೀತಿ ಗಳಿಸಿದ್ದರು.
ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಯಶವಂತ ಸರದೇಶಪಾಂಡೆ ಅವರ ಸಾಂಸ್ಕೃತಿಕ ಕೊಡುಗೆಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.