ಬೆಂಗಳೂರು: 2019ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಾಯಕ ನಟ ಮತ್ತು ಸ್ಟೈಲ್ ಐಕಾನ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದೇ ವೇಳೆ ತಮಗೆ ಬಂದಿರುವ ಅವಾರ್ಡ್ ಗಳನ್ನು ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದರು.
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಿಂದ ಯಶ್ ಸೈಮಾ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪಡೆದ ನಂತರ ಮಾತನಾಡಿರುವ ಯಶ್ ಅವರು, ಮೊದಲಿಗೆ ನಾನು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಧನ್ಯವಾದ. ‘ಕೆಜಿಎಫ್’ ಎನ್ನುವುದು ಬರಿ ಸಿನಿಮಾ ಅಲ್ಲ. ಇದು ಸ್ಯಾಂಡಲ್‍ವುಡ್ ಇಂಡಸ್ಟ್ರಿಯ ಕನಸಾಗಿದೆ. ನಮ್ಮ ಕನ್ನಡ ಚಿತ್ರರಂಗದ ಗುಣಮಟ್ಟ, ಇನ್ನೊಂದು ಲೆವಲ್ ಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಭರವಸೆ ಹುಟ್ಟಿಸಿದ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ತಂತ್ರಜ್ಞರು, ಕಲಾವಿದರು ಎಲ್ಲರೂ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ
ಕನ್ನಡ ಚಿತ್ರರಂಗವನ್ನ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹುಚ್ಚು ಕನಸು ಇಟ್ಟುಕೊಂಡು ಗಲ್ಲಿಗಳಲ್ಲಿ, ಸಣ್ಣಪುಟ್ಟ ರೂಂಗಳಲ್ಲಿ ಕಥೆ ಮಾಡಿಕೊಂಡು ಕುಳಿತಿರುವ ಭವಿಷ್ಯದ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಕೆಜಿಎಫ್ ಎಂಬ ಅದ್ಭುತ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್ ಸರ್, ವಿಜಯ್ ಕಿರಗಂದೂರ್ ಇಲ್ಲದಿದ್ದರೆ ಈ ಸಿನಿಮಾವಾಗುತ್ತಿರಲಿಲ್ಲ ಹೀಗಾಗಿ ಅವರಿಬ್ಬರಿಗೂ ವಿಶೇಷ ಧನ್ಯವಾದ. ಪ್ರತಿಯೊಬ್ಬ ಕನ್ನಡಿಗರೂ ಮತ್ತು ದಿಗ್ಗಜರುಗಳಿಗೆ ಧನ್ಯವಾದ ತಿಳಿಸಲು ಇಷ್ಟ ಪಡುತ್ತೇನೆ ಎಂದು ಹೇಳಿದರು.
2019ರ ಸೈಮಾದಲ್ಲಿ ‘ಕೆಜಿಎಫ್’ ಸಿನಿಮಾಗೆ ಬರೋಬ್ಬರಿ ಐದು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ನಟ ಯಶ್, ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್, ಅತ್ಯುತ್ತಮ ಛಾಯಾಗ್ರಾಹಕ ಭುವನ್ ಗೌಡ, ಅತ್ಯುತ್ತಮ ಪೋಷಕ ನಟ ಅಚ್ಚುತ್ ಕುಮಾರ್, ಅತ್ಯುತ್ತಮ ಪೋಷಕ ನಟಿ ಅರ್ಚನಾ ಜೋಯಿಸ್ ಅವರಿಗೆ ಸೈಮಾ ಪ್ರಶಸ್ತಿ ಲಭಿಸಿದೆ.
https://www.facebook.com/publictv/videos/339916250221398/