Saturday, 22nd February 2020

Recent News

ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

ದೋಹಾ: ಸಾಕಷ್ಟು ಕೂತೂಹಲ ಕೆರಳಿಸಿದ್ದ 2019ರ ಸೈಮಾ ಪ್ರಶಸ್ತಿಗೆ ತೆರೆಬಿದ್ದಿದೆ. ಕತಾರ್ ನ ರಾಜಧಾನಿ ದೋಹಾದಲ್ಲಿ ದಕ್ಷಿಣ ಭಾರತದ 8ನೇ ಅಂತರಾಷ್ಟ್ರೀಯ ವರ್ಣರಂಜಿತ ಸಮಾರಂಭ ನಡೆದಿದ್ದು 2019ರ ಸೈಮಾ ಪ್ರಶಸ್ತಿ ಘೋಷಣೆಯಾಗಿದೆ.

ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಯ ಸಿನಿದಿಗ್ಗಜರು ಒಟ್ಟಾಗಿ ಸೇರಿದ್ದು ಸೈಮಾ ಗೋಲ್ಡನ್ ಟ್ರೋಪಿಗೆ ಮುತ್ತಿಕ್ಕಿದ್ದಾರೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಖಳನಾಯಕ. ಅತ್ಯುತ್ತಮ ನಟಿ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ.

ಅತ್ಯುತ್ತಮ ನಟನಾಗಿ ಮಿಂಚಿದ ರಾಕಿಭಾಯ್, ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಅವರಿಗೆ 2019ರ ಸೈಮಾ ಅತ್ಯುತ್ತಮ ನಟನಾಗಿ ಗೋಲ್ಡನ್ ಬ್ಯೂಟಿಗೆ ಮುತ್ತಿಕ್ಕಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ದೇಶದಾದ್ಯಂತ ಉತ್ತಮ ಯಶಸ್ಸು ಕಂಡಿತ್ತು.

ಕೆಜಿಎಫ್‍ನಂತಹ ಬಿಗ್ ಬಜೆಟ್ ಸಿನಿಮಾ ಮಾಡಿ ಸೈ ಅನಿಸಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸೈಮಾದ ಅತ್ಯುತ್ತಮ ನಿರ್ದೇಶಕನಾಗಿ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲೇ ಉಗ್ರಂ ರೀತಿಯ ಮಾಸ್ ಹಿಟ್ ಕೊಟ್ಟಿದ್ದ ಪ್ರಶಾಂತ್ ತನ್ನ ಎರಡನೇ ಚಿತ್ರದಲ್ಲಿ ಕೆಜಿಎಫ್‍ನಂತಹ ಬಿಗ್ ಸಿನಿಮಾ ಮಾಡಿ ಗೆದ್ದಿದ್ದರು.

ಕನ್ನಡ ವಿಭಾಗ ಸೈಮಾ ಪ್ರಶಸ್ತಿಯ ಬಹುಪಾಲು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಕೆಜಿಎಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ್ದ ಅರ್ಚನಾ ಜೋಯಿಸ್ ಅವರಿಗೆ ಸೈಮಾದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರತಿದೆ.

ಕೆಜಿಎಫ್ ಸಿನಿಮಾಗೆ ಒಟ್ಟು ಐದು ಪ್ರಶಸ್ತಿಗಳು ಲಭಿಸಿದ್ದು, ಕೆಜಿಎಫ್ ಸಿನಿಮಾದಲ್ಲಿ ರಾಜಕಾರಣಿಯಾಗಿ ಅಭಿನಯಸಿದ್ದ ಅಚ್ಯುತ್ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ಕೆಜಿಎಫ್ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಮಾಡಿದ್ದ ಭುವನ್ ಗೌಡ ಅವರಿಗೆ ಸೈಮಾದ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರಕ್ಕೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದ್ದು, ಈ ಚಿತ್ರದಲ್ಲಿ ಡಾಲಿ ಎಂಬ ಹೆಸರಿನ ಪಾತ್ರದಲ್ಲಿ ತನ್ನ ವಿಭಿನ್ನ ನಟನೆಯ ಮೂಲಕ ಸಖತ್ ಮನೋರಂಜನೆ ನೀಡಿದ್ದ ಡಾಲಿ ಧನಂಜಯ ಅವರಿಗೆ 2019ರ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದೆ.

ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ಅಯೋಗ್ಯ ಚಿತ್ರ ತಂಡಕ್ಕೆ ಸಿಕ್ಕಿದೆ. ಸತೀಶ್ ನಿನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಕಿಕೊಂಡು ಉತ್ತಮ ಕೌಟುಂಬಿಕ ಕಾಮಿಡಿ ಚಿತ್ರ ಮಾಡಿದ ಮಹೇಶ್ ಅವರಿಗೆ ಸೈಮಾದ ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ದೊರಕಿದೆ. ಇದೇ ಚಿತ್ರದ `ಏನಮ್ಮಿ ಏನಮ್ಮಿ’ ಪದ್ಯ ಬರೆದ ಚೇತನ್ ಕುಮಾರ್ ಅವರಿಗೆ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿ ಸಿಕ್ಕಿದೆ.

ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ ಕರಾಳರಾತ್ರಿ ಸಿನಿಮಾಗೆ ಅತ್ಯುತ್ತಮ ನವ ನಟಿ ಪ್ರಶಸ್ತಿ ಸಿಕಿದ್ದು, ಈ ಚಿತ್ರದಲ್ಲಿ ಜೆಕೆ ಜೊತೆ ನಾಯಕಿಯಾಗಿ ನಟಿಸಿದ್ದ ಬಿಗ್‍ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ಪ್ರಶಸ್ತಿ ಗೆದ್ದಿದ್ದಾರೆ.

ಬೆಲ್‍ಬಾಟಮ್ ಖ್ಯಾತಿಯ ನಟ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಹೆಸರುವಾಸಿಯಾದ ಪ್ರಕಾಶ್ ತುಮಿನಾಡ್ ಅವರಿಗೆ ಸೈಮಾ ಪ್ರಶಸ್ತಿ ಒಲಿದಿದೆ.

Leave a Reply

Your email address will not be published. Required fields are marked *