ಮೈಸೂರು: ತನಗೆ ಹಣ ಕಳುಹಿಸಿದ್ದ ಅಭಿಮಾನಿಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಭೇಟಿಯಾಗಿದ್ದು, ಅಪರೂಪದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.
ರಿಷಬ್ ಶೆಟ್ಟಿ ಅಭಿಮಾನಿ ಭರತ್ ರಾಮಸ್ವಾಮಿಯನ್ನು ಭೇಟಿ ಮಾಡಿದ್ದಾರೆ. ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ ಸಂಸ್ಥೆಗೆ ಭೇಟಿ ನೀಡಿ, ಪತ್ರ ಹಾಗೂ ಹಣ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ
ಈ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ 200 ರೂ. ಕಳುಹಿಸಿದ್ದ ಅಭಿಮಾನಿ ಭರತ್ ರಾಮಸ್ವಾಮಿರನ್ನ ಭೇಟಿ ಮಾಡಬೇಕು ಅಂತ ಯೋಚಿಸಿದ್ದೆ. ಇಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಬಂದಿದ್ದೆ. ಹೀಗಾಗಿ ಅವರನ್ನ ಭೇಟಿಯಾದೆ. ಇಂತಹ ಅಭಿಮಾನಿಗಳಿಂದ ಒಳ್ಳೆ ಚಿತ್ರಗಳು ಗೆಲ್ಲುತ್ತವೆ ಎಂದು ಹೇಳಿದರು.
ಪತ್ರ ನೋಡಿ ಬಂದ ನಟ ರಿಷಬ್ ಶೆಟ್ಟಿಯನ್ನು ನೋಡಿ ಅಭಿಮಾನಿ ಭರತ್ ರಾಮಸ್ವಾಮಿ ಖುಷಿ ವ್ಯಕ್ತಪಡಿಸಿದರು. ನಂತರ ರಿಷಬ್ ಶೆಟ್ಟಿ ಕೆಲಕಾಲ ಅಭಿಮಾನಿಯ ಜೊತೆ ಕಾಲಕಳೆದು ಬೆಂಗಳೂರಿಗೆ ವಾಪಸ್ಸಾದರು.
ಇಂತಹ ಚಿತ್ರಪ್ರೇಮಿಗಳಿರುವ ತನಕ ಒಳ್ಳೆಯ ಕನ್ನಡ ಚಿತ್ರಗಳಿಗೆ ಎಂದಿಗೂ ಸೋಲಿಲ್ಲ. ಪ್ರೇಕ್ಷಕರ ಒಲವೇ ಚಿತ್ರದ ನಿಜವಾದ ಗೆಲುವು. ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ. (ಜೊತೆಗೆ ಚಿತ್ರದ ಕಲೆಕ್ಷನ್ ತಿದ್ದುಪಡಿ ಮಾಡಿಕೊಳ್ಳುತ್ತೇವೆ.)????#SHPSK pic.twitter.com/x0CDpEJjo7
— Rishab Shetty (@shetty_rishab) January 31, 2020
ನಟ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ 2018ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಭರತ್ ರಾಮಸ್ವಾಮಿ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ಹಣವನ್ನು ಕಳುಹಿಸಿಕೊಟ್ಟಿದ್ದರು.