– ನೀವು ಬದುಕಿದ್ದೇವೆ ಅಂತ ಗೊತ್ತಾಗ್ಬೇಕಾದ್ರೆ ವೋಟ್ ಹಾಕಿ
ಬೆಂಗಳೂರು: ಲೋಕಸಭಾ ಚುನಾವಣೆ ಬಿರುಸಿನಿಂದ ಸಾಗುತ್ತಿದ್ದು, ನಟ ರವಿಚಂದ್ರನ್ ಅವರು ಕುಟುಂಬದ ಸದಸ್ಯರ ಜೊತೆ ಬಂದು ಮತದಾನ ಮಾಡಿದ್ದಾರೆ.
ನಟ ರವಿಚಂದ್ರನ್ ಕುಟುಂಬದ ಸದಸ್ಯರು ರಾಜಾಜಿನಗರದ ಠಾಗೋರ್ ಆಂಗ್ಲ ಮಾಧ್ಯಮ ಶಾಲೆಗೆ ಬಂದು ಮತದಾನ ಮಾಡಿದ್ದಾರೆ. ಆದರೆ ಮತ ಹಾಕುವ ವೇಳೆ ರವಿಚಂದ್ರನ್ ದಂಪತಿ ವೋಟರ್ ಐಡಿ ತರಲು ಮರೆತಿದ್ದಾರೆ.
ನಂತರ ಐಡಿ ಕಾರ್ಡ್ ತಂದು ತೋರಿಸುತ್ತೇನೆ ಎಂದು ಅಧಿಕಾರಿಗಳ ಬಳಿ ಕೇಳಿದ್ದಾರೆ. ಇಲ್ಲವಾದರೇ ನಾನು ಐಡಿ ಬರುವ ತನಕ ಕಾಯುವುದಾಗಿ ಹೇಳಿದ್ದಾರೆ. ಕೊನೆಗೆ ಸಿಬ್ಬಂದಿ ರವಿಚಂದ್ರನ್ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ರವಿಚಂದ್ರನ್ ಪುತ್ರಿ, ಪುತ್ರರು ಕೂಡ ಐಡಿ ಕಾರ್ಡ್ ಮರೆತು ಬಂದಿದ್ದರು. ನಂತರ ಮತಗಟ್ಟೆ ಕೇಂದ್ರದಿಂದ ವಾಪಸ್ ಮನೆಗೆ ಹೋಗಿ ಐಡಿ ಕಾರ್ಡ್ ತಂದು ಮತ್ತೆ ಮತದಾನ ಮಾಡಿದ್ದಾರೆ. ಇದೇ ವೇಳೆ ಅಪ್ಪ ಮತ್ತು ಅಮ್ಮನ ಐಡಿ ಕಾರ್ಡ್ ತಂದು ತೋರಿಸಿದ್ದಾರೆ.
ವೋಟ್ ಮಾಡಿದ ಬಳಿಕ ಮಾತನಾಡಿದ ರವಿಚಂದ್ರನ್, ನೀವು ಬದುಕಿದ್ದೇವೆ ಅಂತ ಗೊತ್ತಾಗಬೇಕಾದರೆ ವೋಟ್ ಹಾಕಬೇಕು. ನಮಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಭವಿಷ್ಯ ಚೆನ್ನಾಗಿರುತ್ತದೆ. ಇಲ್ಲವಾದಲ್ಲಿ ವೋಟುಗಳು ದುರುಪಯೋಗವಾಗುತ್ತದೆ. ಮತದಾನ ಮಾಡದೆ ಹೋದರೆ ಏನು ಉಪಯೋಗವಿಲ್ಲ ಎಂದರು.
ನಾನು ಪ್ರತಿಬಾರಿ ಮತದಾನ ಮಾಡುವುದಕ್ಕೆ ಬಂದಾಗಲೆಲ್ಲ ಜನ ಇರಲ್ಲ. ಇವತ್ತು ಕೂಡ ಜನರು ಕಡಿಮೆ ಇದ್ದಾರೆ. ಎಲ್ಲರೂ ಎದ್ದೇಳಿ, ಬಂದು ಮತದಾನ ಮಾಡಿ. ನೀವು ಮತದಾನ ಮಾಡಿದರೆ ದೇಶ ಚೆನ್ನಾಗಿರುತ್ತದೆ ಅಂತ ಎಲ್ಲರಿಗೂ ಮತ್ತೆ ಮತ್ತೆ ಹೇಳುತ್ತೇನೆ ಎಂದು ರವಿಚಂದ್ರನ್ ಮನವಿ ಮಾಡಿದರು.