ತಿರುವನಂತಪುರಂ: ಬಹುಭಾಷಾ ನಟಿಯ ಅಪಹರಣ (Kidnap) ಮತ್ತು ಅತ್ಯಾಚಾರ (Rape) ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ (Actor Dileep) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ 8ನೇ ಆರೋಪಿಯಾಗಿದ್ದ ನಟ ದಿಲೀಪ್ ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಹನಿ ಎಂ ವರ್ಗೀಸ್ ಅವರು ಆರು ವರ್ಷಗಳ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದ ಮೊದಲ 6 ಆರೋಪಿಗಳು ದೋಷಿಗಳು ಎಂದು ಕೋರ್ಟ್ ಹೇಳಿದ್ದು ಇವರಿಗೆ ಡಿ.12 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಇದನ್ನೂ ಓದಿ: ಮಂಜು ಹೇಳಿಕೆಯ ನಂತ್ರ ಸಂಚು, ಕೆರಿಯರ್ ನಾಶಮಾಡಲೆಂದೇ ಸಿಲುಕಿಸಲಾಗಿತ್ತು- ದಿಲೀಪ್ ಮೊದಲ ಮಾತು
ಏನಿದು ಪ್ರಕರಣ?
2017ರ ಫೆಬ್ರವರಿ 17ರಂದು ಈ ಪ್ರಕರಣ ನಡೆದಿತ್ತು. ತ್ರಿಶ್ಯೂರ್‌ನಿಂದ ಕೊಚ್ಚಿಗೆ ನಟಿ ಶೂಟಿಂಗ್‌ಗೆ ತೆರಳುತ್ತಿದ್ದರು. ಅಂಗಮಾಲಿ ಬಳಿಯ ಅತ್ತಾಣಿ ಎಂಬಲ್ಲಿ ನಟಿ ಸಂಚರಿಸುತ್ತಿದ್ದ ಕಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ. ಟಿಟಿಯಲ್ಲಿ ಬಂದಿದ್ದ ಎ1 ಆರೋಪಿ ಪಲ್ಸರ್ ಸುನಿ ನೇತೃತ್ವದ ತಂಡ ನಟಿಯನ್ನು ಆಕೆಯ ಕಾರಿನಲ್ಲೇ ಅಪಹರಿಸಿದ್ದರು. ಇದನ್ನೂ ಓದಿ: ನಟಿಯ ನಗ್ನ ಫೋಟೋ, ವಿಡಿಯೋ ಬಯಸಿದ್ರಾ ನಟ ದಿಲೀಪ್? – ವರದಿ ಹೇಳಿದ್ದೇನು?
ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 120 ಎ (ಪಿತೂರಿ), 120 ಬಿ (ಕ್ರಿಮಿನಲ್ ಪಿತೂರಿ), 109 (ಅಪರಾಧಕ್ಕೆ ಪ್ರಚೋದನೆ), 366 (ಮಹಿಳೆಯನ್ನು ಅಪಹರಿಸುವುದು), 354 (ಕೆರಳಿಸುವ ಉದ್ದೇಶದಿಂದ ಲ್ಲೆ), 354 ಬಿ (ಮಹಿಳೆಯನ್ನು ವಿವಸ್ತ್ರಗೊಳಿಸುವುದು), 376 ಡಿ (ಸಾಮೂಹಿಕ ಅತ್ಯಾಚಾರ), 201 (ಸಾಕ್ಷಿ ನಾಶ), 212 (ಅಪರಾಧಿಗೆ ಆಶ್ರಯ ನೀಡುವುದು) ಅಡಿ ಆರೋಪ ಹೊರಿಸಲಾಗಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E (ಒಪ್ಪಿಗೆಯಿಲ್ಲದೆ ವ್ಯಕ್ತಿಯ ಖಾಸಗಿ ಚಿತ್ರಗಳನ್ನು ಸೆರೆಹಿಡಿಯುವುದು ಅಥವಾ ರವಾನಿಸುವುದು) ಮತ್ತು 67A (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಚಿತ್ರಗಳನ್ನು ರವಾನಿಸುವುದು) ಅಡಿಯಲ್ಲೂ ಆರೋಪ ಮಾಡಲಾಗಿತ್ತು.

