ತಡರಾತ್ರಿ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರೊಂದಿಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh), ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಟ ದರ್ಶನ್ (Darshan) ಅವರಿಗೆ ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ. ನಾವು ತಡರಾತ್ರಿ ಪಾರ್ಟಿ ಮಾಡಲಿಲ್ಲ. ಊಟಕ್ಕೆ ಕುಳಿತಿದ್ದೆವು. ಅಡುಗೆ ಮಾಡೋದು ತಡವಾಗಿದ್ದರಿಂದ ತಡರಾತ್ರಿ ಆಗಿದೆ ಎಂದರು.
ತಡರಾತ್ರಿ ಎಷ್ಟೋ ಬಾರ್ ಗಳು ಓಪನ್ ಇರುತ್ತವೆ. ಆದರೆ, ಈವರೆಗೂ ಯಾವುದೇ ಗ್ರಾಹಕನಿಗೆ ಈ ರೀತಿ ನೋಟಿಸ್ ಕೊಟ್ಟಿಲ್ಲ. ಸಾಮಾನ್ಯ ಜನರಿಗೂ, ಸೆಲೆಬ್ರಿಟಿಗಳಿಗೂ ಒಂದೇ ಕಾನೂನು. ನಮಗೆ ಅವತ್ತು ಯಾವ ಪೊಲೀಸರೂ ಕೇಳಿಲ್ಲ. ಯಾರಿಗೂ ತೊಂದರೆ ಆಗುವಂತೆ ನಡೆದುಕೊಂಡಿಲ್ಲವೆಂದು ಇದೇ ಸಂದರ್ಭದಲ್ಲಿ ರಾಕ್ ಲೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಮುಗಿಯುತ್ತಿದ್ದಂತೆಯೇ ಅಂದೇ ದರ್ಶನ್ ಅಂಡ್ ಟೀಮ್ ಸಕ್ಸಸ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಚಿಕ್ಕಣ್ಣ, ಡಾಲಿ ಧನಂಜಯ್ಯ, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯ ನಗರ ಪೊಲೀಸ್ (Police) ವಿಚಾರಣೆಗೆ ಹಾಜರಾಗುವಂತೆ ನಟರಿಗೆ ಮತ್ತು ನಿರ್ಮಾಪಕರಿಗೆ ನೋಟಿಸ್ ನೀಡಿದ್ದರು. ನೋಟಿಸ್ ವಿಚಾರವಾಗಿ ಇಂದು ಎಲ್ಲ ನಟರೂ ವಿಚಾರಣೆಗೆ ಹಾಜರಿದ್ದರು.