Connect with us

Cinema

ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಚಿರಂಜೀವಿ – ಕೈ ಮುಗಿದು ಮನವಿ

Published

on

ಹೈದರಾಬಾದ್: ದೇಶದಲ್ಲಿ ಕೊರೊನಾದಿಂದ ಜನರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಈ ವೇಳೆ ಅನೇಕ ನಟ, ನಟಿಯರು ಸೇರಿದಂತೆ ಕಲಾವಿದರೂ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅದರಂತೆ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಕೊರೊನಾ ಸಂಕಷ್ಟದ ಸಮಯದಲ್ಲಿ ದೇಣಿಗೆ ನೀಡುವ ಮೂಲಕ ಸಹಾಯದ ಹಸ್ತ ಚಾಚಿದ್ದರು. ಇದೀಗ ಚಿರಂಜೀವಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೊರೊನಾ ಲಾಕ್‍ಡೌನ್ ಆದ ನಂತರ ರಕ್ತದಾನ ಮಾಡುವವರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಇದರಿಂದ ಅನೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತ ದಾಸ್ತಾನು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ನಟ ಚಿರಂಜೀವಿ ರಕ್ತದಾನ ಮಾಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳು, ನಾಗರೀಕರು ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.

ಇಂದು ಚಿರಂಜೀವಿ ಆಸ್ಪತ್ರೆಯೊಂದರಲ್ಲಿ ರಕ್ತದಾನ ಮಾಡಿದ್ದಾರೆ. ಇವರ ಜೊತೆಗೆ ತೆಲುಗಿನ ಮತ್ತೊಬ್ಬ ಹಿರಿಯ ನಟ ಶ್ರೀಕಾಂತ್, ಅವರ ಮಗ ರೋಷನ್ ಸಹ ರಕ್ತದಾನ ಮಾಡಿದ್ದಾರೆ. ಚಿರಂಜೀವಿ ಅವರು ರಕ್ತದಾನ ಮಾಡಿರುವ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾದಿಂದ ರಕ್ತದಾನ ಮಾಡುವವರು ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಬ್ಲಡ್ ಸಿಗದೇ ತೊಂದರೆಪಡುತ್ತಿದ್ದಾರೆ. ಇದರಿಂದ ಅನೇಕರು ಜೀವ ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ. ಜೀವ ಉಳಿಸಲು ನೆರವಾಗಿ. ನಾವು ರಕ್ತದಾನ ಮಾಡಿದಾಗ ಸಿಗುವ ಖುಷಿ ಬೇರೆ ಏನೂ ಮಾಡಿದರೂ ಸಿಗುವುದಿಲ್ಲ. ಹೀಗಾಗಿ ದಯವಿಟ್ಟು ಎಲ್ಲರೂ ರಕ್ತದಾನ ಮಾಡಿ ಎಂದು ಕೈ ಮುಗಿದು ಮನವಿ ಮಾಡಿಕೊಂಡರು.

ರಕ್ತದಾನ ಮಾಡಲು ಹೊರಗೆ ಹೋಗಲು ಪೊಲೀಸರಿಂದ ಸಮಸ್ಯೆಯಾಗುವುದಿಲ್ಲ. ನೀವು ಸಮೀಪದ ಬ್ಲಡ್ ಬ್ಯಾಂಕ್, ಆಸ್ಪತ್ರೆಯನ್ನು ಫೋನ್ ಮೂಲಕ ಸಂಪರ್ಕಿಸಿ ರಕ್ತದಾನ ಮಾಡಲು ಬರುವುದಾಗಿ ಹೇಳಿದ್ರೆ, ಆಸ್ಪತ್ರೆಯವರು ನಿಮ್ಮ ಮೊಬೈಲ್‍ಗೆ ವಾಟ್ಸಪ್ ಮೂಲಕ ಅನುಮತಿ ಪತ್ರ ಕಳುಹಿಸುತ್ತಾರೆ. ಅದನ್ನು ಪೊಲೀಸರಿಗೆ ತೋರಿಸಿ ಆಸ್ಪತ್ರೆಗೆ ಹೋಗಬಹದು ಎಂದು ತಿಳಿಸಿದರು.

ಅಷ್ಟೆ ಅಲ್ಲದೇ ಪೊಲೀಸರು ಸಹ ರಕ್ತದಾನ ಮಾಡಲು ಬೆಂಬಲವಾಗಿ ನಿಂತಿದ್ದಾರೆ. ಪೊಲೀಸರು ಕೂಡ ಮೊಬೈಲ್ ನಂಬರ್ ಕೊಟ್ಟಿದ್ದು, ಆ ನಂಬರ್‍ಗೆ ಫೋನ್ ಮಾಡಿದ್ರೆ ಅವರೇ ಬಂದು ರಕ್ತದಾನ ಮಾಡುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಜೊತೆಗೆ ಸುರಕ್ಷಿತವಾಗಿ ವಾಪಸ್ ತಂದು ಮನೆಗೆ ಸೇರಿಸುತ್ತಾರೆ ಎಂದು ಚಿರಂಜೀವಿ ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *