ಈವರೆಗೂ ಕೆನಡಾ ಪೌರತ್ವ ಪಡೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಇತ್ತೀಚೆಗಷ್ಟೇ ಭಾರತದ ಪೌರತ್ವ ಪಡೆದುಕೊಂಡಿದ್ದರು. ಹಾಗಾಗಿ ಮೊದಲ ಬಾರಿಗೆ ಅವರು ಭಾರತದಲ್ಲಿ ಮತದಾನ ಮಾಡಿದ್ದಾರೆ. ಇಂದು ಮತದಾನ ಮಾಡಿದ ನಂತರ ಮಾತನಾಡಿದ ಅಕ್ಷಯ್, ಭಾರತದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರಕ್ಕಾಗಿ ಮತದಾನ ಮಾಡಿ ಎಂದಿದ್ದಾರೆ.
ಇಂದು ಲೋಕಸಭೆಗೆ ಐದನೇ ಹಂತದಲ್ಲಿ (Loksabha Elections 2024) ಮತದಾನ ನಡೆಯುತ್ತಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಬಿಹಾರದ 5, ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್‌ನ 3, ಲಡಾಖ್‍ನ 1, ಮಹಾರಾಷ್ಟ್ರದ 13, ಒಡಿಶಾದ 5, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಮೇಥಿ, ರಾಯ್ ಬರೇಲಿ, ಲಕ್ನೋ, ಕೈಸರ್ ಗಂಜ್, ಸರನ್ ಮತ್ತು ಮುಂಬೈನ ಎಲ್ಲಾ ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಾಗಿವೆ.
ಉತ್ತರ ಪ್ರದೇಶದ ಅಮೇಥಿಯಿಂದ ಸ್ಮೃತಿ ಇರಾನಿ ಮತ್ತು ಕೆಎಲ್ ಶರ್ಮಾ, ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ದಿನೇಶ್ ಪ್ರತಾಪ್ ಸಿಂಗ್, ಲಕ್ನೋದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರದ ಸರಣ್‍ನಿಂದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ಮಹಾರಾಷ್ಟ್ರ ಕಲ್ಯಾಣದಿಂದ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಡಾ.ಶ್ರೀಕಾಂತ್ ಶಿಂಧೆ, ಮುಂಬೈ ಉತ್ತರದಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿರಿಯ ವಕೀಲ ಉಜ್ವಲ್ ನಿಕಮ್, ಮಧ್ಯ ಮುಂಬೈ ವರ್ಷಾ ಗಾಯಕ್ವಾಡ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್, ರಾಯ್ ಬರೇಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್, ಮುಂಬೈ ಉತ್ತರ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೊಯೇಲ್, ಅಮಿರ್ ಪುರ್ ನಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹಾಗೂ ಕೈಸರಗಂಜ್ ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಈಗಾಗಲೇ ಮತದಾನ ಮಾಡಿದ್ದಾರೆ. ಇನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕುಟುಂಬ ಸಮೇತರಾಗಿ ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.