ಬೆಳಗಾವಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರೋ ಹುದ್ದೆ ಭರ್ತಿಗೆ ಕ್ರಮವಹಿಸೋದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಜಿ. ಮೂಳೆ ಪ್ರಶ್ನೆ ಕೇಳಿದ್ರು. ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ 32,870 ಹುದ್ದೆಗಳು ಖಾಲಿ ಇವೆ. ಇಲಾಖೆಯಲ್ಲಿ 50% ಹುದ್ದೆ ಖಾಲಿ ಇವೆ. ಹುದ್ದೆ ಖಾಲಿ ಇರೋದ್ರಿಂದ ಆರೋಗ್ಯ ಇಲಾಖೆಗೆ ಸಮಸ್ಯೆ ಆಗ್ತಿದೆ. ಆಸ್ಪತ್ರೆಗೆ ಬರೋ ರೋಗಿಗಳಿಗೆ ಸಮಸ್ಯೆ ಇದೆ. ಡಾಕ್ಟರ್‌ಗಳ ಹುದ್ದೆ ಖಾಲಿ ಇದೆ. ಖಾಲಿ ಹುದ್ದೆ ಹೊರಗುತ್ತಿಗೆ ಆಧಾರದಲ್ಲೂ ನೇಮಕ ಆಗಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಖಾಲಿ ಹುದ್ದೆಗಳು ಜಾಸ್ತಿ ಇವೆ. ಕಳೆದ ಅಧಿವೇಶನದಲ್ಲೂ ಇದೇ ಉತ್ತರ ಬಂದಿದೆ. ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಕಾರ್ಯಕ್ರಮ ಜಾರಿ – ದಿನೇಶ್ ಗುಂಡೂರಾವ್
ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಖಾಲಿ ಇರೋ 32 ಸಾವಿರ ಹುದ್ದೆಗಳಲ್ಲಿ ಹಲವು ರೀತಿ ಭರ್ತಿ ಮಾಡೋ ಕೆಲಸ ಆಗಿದೆ. ಔಟ್ ಸೋರ್ಸ್‌ನಲ್ಲಿ ಅನೇಕ ಹುದ್ದೆ ಭರ್ತಿ ಆಗಿವೆ. 500 ಹೆಚ್ಚು MBBS ಡಾಕ್ಟರ್‌ಗಳನ್ನ ಔಟ್ ಸೋರ್ಸ್‌ನಲ್ಲಿ ಭರ್ತಿ ಮಾಡಾಗಿದೆ. ಒಟ್ಟಾರೆ 18,040 ಹುದ್ದೆಗಳನ್ನ ಔಟ್ ಸೋರ್ಸ್‌ನಲ್ಲಿ ಭರ್ತಿ ಮಾಡಲಾಗಿದೆ ಎಂದಿದ್ದಾರೆ.
1,800 ಹುದ್ದೆಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದಾರೆ. ಆದಷ್ಟು ಬೇಗ ನೇಮಕಾತಿ ಮಾಡ್ತೀವಿ. ತಜ್ಞ ವೈದ್ಯರ ನೇಮಕಾತಿಗಾಗಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ನಿಯಮದ ಪ್ರಕಾರ ತಜ್ಞ ಡಾಕ್ಟರ್‌ಗಳ ಸಂಬಳ ಇದೆ. ಇದನ್ನ ಹೆಚ್ಚಳ ಮಾಡಲು ನಮಗೆ ಅನುಮತಿ ಕೊಡಿ ಅಂತ ಮನವಿ ಮಾಡಿದ್ದೇವೆ. ಕೇಂದ್ರ ಕೂಡಾ ಓರಲ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ಅಧಿಕೃತವಾಗಿ ಅನುಮತಿ ಬಂದ ಮೇಲೆ ತಜ್ಞ ವೈದ್ಯರಿಗೆ ನಾವೇ ಸಂಬಳ ಜಾಸ್ತಿ ಮಾಡಿ ನೇಮಕಾತಿ ಮಾಡಿಕೊಳ್ತೀವಿ. ನರ್ಸ್ ಮತ್ತು ಟೆಕ್ನಿಷನ್ಸ್ ನೇಮಕಕ್ಕೆ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದೇವೆ. ಅವರು ಗುತ್ತಿಗೆ ಆಧಾರದಲ್ಲಿ ಅನುಮತಿ ಕೊಟ್ಟರೂ ನಾವು ನೇಮಕಾತಿ ಮಾಡಿಕೊಳ್ತೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ – ಸದನದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ಕೋಲಾಹಲ