ಬೆಂಗಳೂರು: ನಾಗೇಶ್ (Accused Nagesh) ಎಂಬಾತನಿಂದ ಆ್ಯಸಿಡ್ ದಾಳಿಗೆ (Acid Victim) ಒಳಗಾಗಿ ಚಿಕಿತ್ಸೆ ಪಡೆದು ನಂತರ ಗುಣಮುಖರಾಗಿರುವ ಸಂತ್ರಸ್ತೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸಂತ್ರಸ್ತೆಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಕಳೆದ ಏಪ್ರಿಲ್ 28 ರಂದು ಯುವತಿ ಮೇಲೆ ಆ್ಯಸಿಡ್ ದಾಳಿ ಆಗಿತ್ತು. ನಾಗೇಶ್ ಎಂಬಾತನಿಂದ ಯುವತಿ ಆ್ಯಸಿಡ್ ದಾಳಿಗೊಳಗಾಗಿದ್ದರು. ನಂತರ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರದಿಂದ ಅನುಕಂಪದ ಆಧಾರದಲ್ಲಿ ಕೆಲಸ, ಮನೆ, ಪರಿಹಾರದ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಸರ್ಕಾರದಿಂದ ಇದುವರೆಗೆ ಯಾವುದೇ ಭರವಸೆ ಈಡೇರಿಲ್ಲ. ಇದೀಗ ಯುವತಿಗೆ ಕೆಲಸ, ಮನೆ, ಪರಿಹಾರ ಒದಗಿಸುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ನಾಗನ ಮೇಲೆ 900 ಪುಟಗಳ ಚಾರ್ಜ್‍ಶೀಟ್
ಆ್ಯಸಿಡ್ ಸಂತ್ರಸ್ತೆ ಭೇಟಿ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಇವತ್ತು ಯುವತಿ ಮತ್ತು ಅವರ ಕುಟುಂಬದವರು ಭೇಟಿ ಮಾಡಿದ್ದಾರೆ. ಇವತ್ತೇ ಮುಖ್ಯ ಕಾರ್ಯದರ್ಶಿ ಅವರ ಜತೆ ಯುವತಿ ಬಗ್ಗೆ ಮಾತಾಡ್ತೀನಿ. ಕೆಲಸ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ. ಈಗಾಗಲೇ ಸರ್ಕಾರ ಆ್ಯಸಿಡ್ ದಾಳಿಗೆ ಒಳಗಾಗಿರುವವರಿಗೆ ಮಾಸಾಶನ ಹೆಚ್ಚಿಸಿದೆ. 3 ರಿಂದ 10 ಸಾವಿರಕ್ಕೆ ಮಾಸಾಶನ ಏರಿಸಲಾಗಿದೆ. ಯುವತಿಗೆ ಮಾಸಾಶನವನ್ನೂ ಕೊಡ್ತೇವೆ. ಬೆಂಗಳೂರು ಸಮೀಪ 40 ಸಾವಿರ ಮನೆಗಳ ನಿರ್ಮಾಣ ಆಗ್ತಿದೆ. ಈ ಯುವತಿಗೂ ಒಂದು ಮನೆ ಕೊಡ್ತೇವೆ. ವಸತಿ ಸಚಿವರ ಜತೆ ಮನೆ ಕೊಡುವ ಬಗ್ಗೆ ಹೇಳ್ತೇನೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ.
ಸಿಎಂ ಭೇಟಿ ಬಳಿಕ ಆ್ಯಸಿಡ್ ದಾಳಿಗೊಳಗಾದ ಯುವತಿಯ ದೊಡ್ಡಪ್ಪ ಶಂಕರ್ ಮಾತನಾಡಿ, ನಮ್ಮ ಮಗಳು ಏಪ್ರಿಲ್ ತಿಂಗಳಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದಳು. ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಮನೆ ಕೊಡುವ ಭರವಸೆ ಕೊಟ್ಟಿದ್ದಾರೆ. ಸರ್ಕಾರಿ ಕೆಲಸ ಕೊಡುವ ಭರವಸೆ ಸಹ ನೀಡಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಅಹವಾಲು ಸ್ವೀಕರಿಸಿದ್ದರು. ಆ್ಯಸಿಡ್ ದಾಳಿ ಮಾಡಿದವನಿಗೆ ಉಗ್ರ ಶಿಕ್ಷೆ ಆಗಬೇಕೆಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಾಯಂಕಾಲದೊಳಗೆ ಆ್ಯಸಿಡ್ ಸಂತ್ರಸ್ತೆಯ ಜೊತೆ ಮಾತನಾಡಲಿದ್ದಾರೆ ಕಿಚ್ಚ ಸುದೀಪ್