ವಾರಂಗಲ್: ವಿವಾಹಿತ ಮಹಿಳೆಯ ಮೇಲೆ ಆಟೋ ಡ್ರೈವರ್‍ವೊಬ್ಬ ಆ್ಯಸಿಡ್ ದಾಳಿ ನಡೆಸಿರೋ ಘಟನೆ ಬುಧವಾರದಂದು ತೆಲಂಗಾಣದಲ್ಲಿ ನಡೆದಿದೆ. ಕೃತ್ಯ ನಡೆದ ಕೆಲವು ಗಂಟೆಗಳ ನಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ರಿಕ್ಷಾ ಚಾಲಕ ಚಂದು ಬಂಧಿತ ಆರೋಪಿ. ಈತನಿಗೆ ಸಹಕರಿಸಿದ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 24 ವರ್ಷದ ಮಾಧುರಿ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ. ಇವರು ಈ ಹಿಂದೆ ಪೆಟ್ರೋಲ್ ಬಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಚಂದು ಈಕೆಯ ಮೇಲೆ ಕಣ್ಣು ಹಾಕಿದ್ದ. ಆದ್ದರಿಂದ ಮಾಧುರಿ ಕಳೆದ ತಿಂಗಳು ಕೆಲಸ ಬಿಟ್ಟಿದ್ದರು. ನನಗೆ ಈಗಾಗಲೇ ಮದುವೆಯಾಗಿ ಒಬ್ಬಳು ಮಗಳಿದ್ದಾಳೆ ಎಂದರೂ ಚಂದು ಮಹಿಳೆಗೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ವರದಿಯಾಗಿದೆ.
Advertisement
Advertisement
ಬುಧವಾರದಂದು ಮಾಧುರಿ ಕೆಲಸ ಹುಡುಕಿಕೊಂಡು ಹೋಗಿದ್ದರು. ಸ್ವಲ್ಪ ಸಮಯದ ನಂತರ ಆಕೆಯ ತಾಯಿ ಕರೆ ಮಾಡಿದಾಗ ಮಾಧುರಿ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸಂಜೆ ವೇಳೆಗೆ ಗರಿಮಿಲಪಲ್ಲಿ ಮಂಡಲ್‍ನ ಐನವೋಲುನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಾಧುರಿ ಬಿದ್ದಿದ್ದನ್ನು ಸ್ಥಳೀಯರು ನೋಡಿದ್ದರು. ಮಾಧುರಿ ಅವರ ಕೈ-ಕಾಲುಗಳನ್ನ ಕಟ್ಟಲಾಗಿದ್ದು, ಮುಖ ಮತ್ತು ಎದೆಯ ಭಾಗ ಆ್ಯಸಿಡ್‍ನಿಂದ ಸುಟ್ಟಿತ್ತು. ಕೂಡಲೇ ಮಾಧುರಿ ಅವರನ್ನ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ.
Advertisement
ಆರೋಪಿ ಚಂದು ಹಾಗೂ ಆತನಿಗೆ ನೆರವಾದ ಇಬ್ಬರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ತನನ್ನು ಮದುವೆಯಾಗದಿದ್ದರೆ ಕೊಲ್ಲುವುದಾಗಿ ಆರೋಪಿ ಈ ಹಿಂದೆಯೂ ಹಲವು ಬಾರಿ ಮಹಿಳೆಗೆ ಬೆದರಿಕೆ ಹಾಕಿದ್ದ. ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಆತನಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದರು. ಘಟನೆಗೆ ಒಂದು ದಿನ ಮುಂಚೆ ಆರೋಪಿ ಚಂದು ಮಾಧುರಿ ಅವರ ತಾಯಿ ಹಾಗೂ ಸಹೋದರಿ ಮೇಲೂ ದಾಳಿ ಮಾಡಿದ್ದ ಎನ್ನಲಾಗಿದೆ.
Advertisement
ಚಿನ್ನ ಕರಗಿಸಲು ಬಳಸುವ ಆ್ಯಸಿಡ್ ತೆಗೆದುಕೊಂಡ ಹೋಗಿದ್ದ ಚಂದು ಮಾಧುರಿ ಅವರ ಮೇಲೆ ಎರಚಿದ್ದಾನೆ. ಐನವೋಲುದಂತಹ ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ಹೇಗೆ ನಡೆಯಿತು ಎಂಬ ಬಗ್ಗೆ ತಿಳಿಯಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆರೋಪಿ ಆ್ಯಸಿಡ್ ದಾಳಿ ಮಾಡಲು ತನ್ನ ಆಟೋದಲ್ಲೇ ಮಹಿಳೆಯನ್ನು ಕರೆದುಕೊಂಡು ಹೋಗಿದ್ದನಾ? ಮಹಿಳೆಗೆ ವಿಪರೀತ ಬೆದರಿಕೆ ಇದ್ದರೂ ಆತನ ಜೊತೆ ಹೇಗೆ ಹೋದರು? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.