ನವದೆಹಲಿ: ಭಾರತದ ಓಟಗಾರ್ತಿ ದ್ಯುತಿ ಚಂದ್ ತಾವು ಗೆಳತಿಯೊಂದಿಗೆ ಸಲಿಂಗಿ ಸಂಬಂಧದಲ್ಲಿ ಇರುವುದಾಗಿ ಬಹಿರಂಗ ಪಡಿಸಿದ್ದಾರೆ.
ಒಡಿಶಾ ರಾಜ್ಯದ ಓಟಗಾರ್ತಿ ಆಗಿರುವ ದ್ಯುತಿ ಚಂದ್ ತಮ್ಮದೇ ಗ್ರಾಮದ ನಿವಾಸಿ ಆಗಿರುವ ಗೆಳತಿಯೊಂದಿಗೆ ಸಲಿಂಗಿ ಸಂಬಂಧ ಹೊಂದಿದ್ದೇನೆ ಎಂದಿದ್ದಾರೆ. ಅಲ್ಲದೇ ಕೆಲ ಕಾರಣಗಳಿಂದ ನಾನು ಗೆಳತಿಯ ಹೆಚ್ಚಿನ ಮಾಹಿತಿಯನ್ನ ಬಹಿರಂಗ ಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದ್ಯುತಿ ಚಂದ್ ಸಲಿಂಗಿ ಸಂಬಂಧ ಹೊಂದಿರುವುದನ್ನು ಬಹಿರಂಗ ಪಡಿಸಿದ ಮೊದಲ ಭಾರತೀಯ ಅಥ್ಲಿಟ್ ಎನಿಸಿಕೊಂಡಿದ್ದಾರೆ.
ನಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಜೀವಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಸಲಿಂಗಿಯಾಗಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ನಾನು ಮುಂದಿರುತ್ತೇನೆ. ಇದು ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಸದ್ಯ ನಾನು ವಿಶ್ವ ಚಾಂಪಿಯನ್‍ಶಿಪ್ ಹಾಗೂ ಒಲಿಂಪಿಕ್ಸ್ ಕಡೆ ನನ್ನ ಹೆಚ್ಚಿನ ಗಮನ ಇದ್ದು, ಮುಂದಿನ ದಿನಗಳಲ್ಲಿ ನಾನು ಆಕೆಯೊಂದಿಗೆ ಜೀವಿಸಲು ಇಷ್ಟ ಪಡುತ್ತೇನೆ ಎಂದಿದ್ದಾರೆ.
ಪ್ರೀತಿಯನ್ನು ತಪ್ಪು ಎನ್ನಲು ಯಾರಿಗೂ ಹಕ್ಕಿಲ್ಲ, ಇದನ್ನೇ ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಅಥ್ಲೀಟ್ ಆದ ಕಾರಣಕ್ಕೆ ನನಗೆ ಮಾತ್ರ ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 5 ವರ್ಷಗಳ ಕಾಲ ನಾನು ಓಟದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದು, ವೃತ್ತಿ ಜೀವನದಿಂದ ವಿರಾಮ ಪಡೆದ ಬಳಿಕ ನನ್ನ ಜೀವನವನ್ನು ಗೆಳತಿಯೊಂದಿಗೆ ಕಳೆಯುತ್ತೇನೆ ಎಂದಿದ್ದಾರೆ.
2018ರ ಏಷ್ಯನ್ ಗೇಮ್ಸ್ ನಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಂದ್ ಬೆಳ್ಳಿ ಪದಕವನ್ನು ಪಡೆದಿದ್ದರು. 20 ವರ್ಷಗಳ ಇತಿಹಾಸಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ಆಥ್ಲಿಟ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 16 ವರ್ಷಗಳ ಬಳಿಕ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು.