ಮಾಜಿ ಗ್ರಾಪಂ ಸದಸ್ಯನಿಂದ 120 ಎಕರೆ ಕೆರೆ ಭೂಮಿ ಕಬಳಿಕೆ!

Public TV
2 Min Read
YADGIR

– ಲಕ್ಷ ಲಕ್ಷ ಹಣ ಪಡೆದು ಜಾಗ ಲೀಸ್‍ಗೆ ಕೊಟ್ಟ ಭೂಪ

ಯಾದಗಿರಿ: ಕೃಷಿಗೆ ಉತ್ತೇಜನ ಸಿಗಲಿ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರದಿರಲಿ ಎಂಬ ಉದ್ದೇಶದಿಂದ ಸರ್ಕಾರ ಯಾದಗಿರಿಯ (Yadgir) ಗುರುಮಠಕಲ್‍ನ (Gurumitkal) ಬದ್ದೆಪಲ್ಲಿ ಗ್ರಾಮದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿತ್ತು. ಕಳೆದ 15 ವರ್ಷಗಳಿಂದ ಗ್ರಾಮದ ಪ್ರಭಾವಿ ವ್ಯಕ್ತಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯನೊಬ್ಬ ಬರೋಬ್ಬರಿ 120 ಎಕರೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಲಕ್ಷ ಲಕ್ಷ ಹಣ ಪಡೆದು ಈ ಭೂಮಿಯನ್ನು ಲೀಸ್‍ಗೆ ನೀಡಿದ್ದಾನೆ. ಇದರಿಂದ ಕೆರೆ ನೀರು ನಂಬಿ ಕೃಷಿ ಮಾಡಬೇಕಿದ್ದ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

YADGIR 1

ಬದ್ದೆಪಲ್ಲಿ ಗ್ರಾಮದಲ್ಲಿ ಸರ್ಕಾರ 140 ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿತ್ತು. ಇದರಿಂದ ರೈತರಿಗೆ ಅನುಕೂಲವಾಗಿತ್ತು. ಆ ಕೆರೆಯನ್ನೇ ಬಂಡವಾಳ ಮಾಡಿಕೊಂಡ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಅಭಿಮನ್ಯು ಸರ್ಕಾರಿ ಜಮೀನು ಕಬಳಿಕೆ ಮಾಡಿಕೊಂಡಿದ್ದಾನೆ. ಕೆರೆಗೆ ಹತ್ತಿರದಲ್ಲೇ ಆತನ 20 ಎಕರೆ ಜಮೀನಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಆತ ಬೇಸಿಗೆಯಲ್ಲಿ ಕೆರೆಯ ನೀರನ್ನು ಖಾಲಿ ಮಾಡಿ ಕಳೆದ 15 ವರ್ಷಗಳಿಂದ ಇಡೀ ಕೆರೆಯನ್ನ ಒತ್ತುವರಿ ಮಾಡಿ 120 ಎಕರೆ ಜಮೀನಿನನ್ನು ತನ್ನ ವಶಕ್ಕೆ ಪಡೆದಿದ್ದಾನೆ. ಇದನ್ನೂ ಓದಿ: ಮೀಸಲಾತಿಗೆ ನೆಹರು ವಿರೋಧ, ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮನಸ್ಸು ಕಾಂಗ್ರೆಸ್‌ಗೆ ಇರಲಿಲ್ಲ: ಮೋದಿ ಕಿಡಿ

ಈ ಜಾಗದಲ್ಲಿ ವಾಣಿಜ್ಯ ಬೆಳೆ ಖರ್ಬೂಜ ಬೆಳೆಯುತ್ತಿದ್ದಾನೆ. ಸರ್ಕಾರ ಕಳೆದ ವರ್ಷ ಗ್ರಾಮದ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವಂತೆ ಅನುಕೂಲಕ್ಕಾಗಿ ಕೆರೆ ತುಂಬುವ ಯೋಜನೆ ಜಾರಿ ಮಾಡಿ, ಸಣ್ಣ ನೀರಾವರಿ ಇಲಾಖೆ ಮೂಲಕ ಅನುದಾನ ಬಿಡುಗಡೆಗೊಳಿಸಿ ಕೆರೆಯನ್ನು ಸಹ ತುಂಬಿಸಿತ್ತು. ಈ ವೇಳೆ ಅಭಿಮನ್ಯು ತನ್ನ ಸ್ವಾರ್ಥಕ್ಕಾಗಿ ಕೆರೆಯ ನೀರನ್ನು ತೆರವು ಮಾಡಿದ್ದಲ್ಲದೇ, ಕೆರೆಯಲ್ಲಿ ಹೂಳು ಎತ್ತಿ ಕೆರೆಯ ಮಣ್ಣನ್ನು ಸಹ ಮಾರಿಕೊಂಡಿದ್ದ. ಈಗ ಅದೇ ಜಮೀನನ್ನು ಆಂಧ್ರ ಪ್ರದೇಶ ಮೂಲದ ವ್ಯಕ್ತಿಯಿಂದ ಲಕ್ಷ ಲಕ್ಷ ಹಣ ಪಡೆದು ಲೀಸ್‍ಗೆ ನೀಡಿದ್ದಾನೆ.

ಕೆರೆ ನೀರು ಖಾಲಿ ಮಾಡಿದ್ದನ್ನು ಪ್ರಶ್ನೆ ಮಾಡಲು ಹೋದ ಗ್ರಾಮಸ್ಥರ ಮೇಲೂ ಅಭಿಮನ್ಯು ಹಾಗೂ ಆತನ ಕುಟುಂಬಸ್ಥರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ಇಡೀ ಊರಿಗೆ ಊರೇ ಒಗ್ಗಟಾಗಿ ಕಳೆದ ಎರಡು ತಿಂಗಳ ಹಿಂದೆ ಸರ್ಕಾರಿ ಭೂಮಿ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. ಸರ್ಕಾರಿ ಜಮೀನು ಒತ್ತುವರಿ ಮಸಡಿಕೊಂಡಿರೋದು ಕಣ್ಣಿಗೆ ಕಾಣ್ತಿದ್ರೂ ಅಧಿಕಾರಿಗಳು ಯಾಕೆ ಮೌನವಹಿಸಿದ್ದಾರೆ ಎಂದು ಜನ ಪ್ರಶ್ನಿಸಿದ್ದಾರೆ. ಕೆರೆಯ ಜಾಗವನ್ನು ಒತ್ತುವರಿ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಶೈಲಿಯಲ್ಲಿ ಮೊಬೈಲ್‌ಗಳ್ಳರ ಸೆರೆ

Share This Article