ರಾಯಚೂರು: ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಬೈಲಮರ್ಚಡ್ ಗ್ರಾಮದಲ್ಲಿ ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಹಾಗೂ ರೈತರ ಹತ್ತಿ ಬೆಳೆ ಸುಟ್ಟು ಭಸ್ಮವಾಗಿದೆ. ಸ್ಥಳದಲ್ಲಿದ್ದ ರೈತರು ಕೂಡಲೇ ಎಚ್ಚೆತ್ತು ಜಾನುವಾರುಗಳನ್ನ ಬೆಂಕಿ ಕೆನ್ನಾಲಿಗೆಯಿಂದ ರಕ್ಷಿಸಿದ್ದಾರೆ.
ರೈತ ಬಸವರಾಜ, ಚಂದ್ರ, ಅನುಸೂಯಮ್ಮ, ಈಶಪ್ಪ ಎಂಬುವವರಿಗೆ ಸೇರಿದ ಹತ್ತಿ ಹಾಗೂ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಜೊತೆಗೆ ಮಾರಾಟ ಮಾಡಲು ರೈತರು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಹತ್ತಿ ಬೆಳೆ ಭಸ್ಮವಾಗಿದೆ. ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಭತ್ತ ಹಾಗೂ ಜೋಳದ ಬಣವೆಗಳು ಬೆಂಕಿಗಾಹುತಿಯಾಗಿವೆ.ಇದನ್ನೂ ಓದಿ:ವಾಲ್ಮೀಕಿ ಹಗರಣ – ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಾನ್ವಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಜನವಸತಿ ಪ್ರದೇಶಕ್ಕೆ ಬೆಂಕಿ ಹರಡದಂತೆ ಅಗ್ನಿಶಾಮಕ ದಳ ಸಿಬ್ಬಂದಿ ತಡೆದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

