ಹಾಸನ: ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತದಲ್ಲಿ (Accident) ಗಾಯಗೊಂಡಿದ್ದ ದಂಪತಿ (Couple) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ (Hassan) ಸೋಮವಾರ ನಡೆದಿದೆ. ಅನಾಥರಾಗಿರುವ ಇಬ್ಬರು ಪುಟ್ಟ ಕಂದಮ್ಮಗಳಲ್ಲಿ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಬೆಳಗೀಹಳ್ಳಿ ಗೇಟ್ ಬಳಿ ನಡೆದಿದೆ. ವರದಿಗಳ ಪ್ರಕಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದ ಸುನೀಲ್ ಹಾಗೂ ಪತ್ನಿ ದಿವ್ಯಾ ಸಾವನ್ನಪ್ಪಿರುವ ದಂಪತಿ. ಹೊಸ ವರ್ಷದ ಹಿನ್ನೆಲೆ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಸಂದರ್ಭ ಘಟನೆ ನಡೆದಿದೆ.
ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಸುನೀಲ್ ಸ್ಥಳದಲ್ಲೇ ಮೃತಪಟ್ಟರೆ, ದಿವ್ಯಾ ಹಾಗೂ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ದಿವ್ಯಾ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಮಕ್ಕಳಲ್ಲಿ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ
ಅಪಘಾತದ ನಂತರ ಕಾರು ಚಾಲಕ ಮೃತ ಸುನೀಲ್, ಪತ್ನಿ ದಿವ್ಯಾ ಮತ್ತು ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಈ ವೇಳೆ ಯಾವುದೋ ವಾಹನ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆ – 15 ದಿನದಲ್ಲಿ 3ನೇ ಘಟನೆ