ಬೆಂಗಳೂರು: ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮನಕಲುವ ದುರಂತವೊಂದು ಸಂಭವಿಸಿದೆ.
ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ಸಂಭವಿಸಿದ್ದು, ಚಿಕ್ಕ ಬಾಲಕ ಸಾವನ್ನಪ್ಪಿದ್ದಾನೆ. ಹೆಲ್ಮೆಟ್ ಧರಿಸದ ತಪ್ಪಿಗೆ ಬೈಕ್ ಸವಾರ ಮೊಮ್ಮಗನನ್ನ ಕಳೆದುಕೊಂಡಿದ್ದಾರೆ. ವಿದ್ಯಾ ವರ್ಧಕ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯಾದ 9 ವರ್ಷದ ದರ್ಶನ್ ದುರಂತ ಅಂತ್ಯ ಕಂಡ ಬಾಲಕ.
ನಡೆದಿದ್ದೇನು: ಇಂದು ಮಧ್ನಾಹ್ನ ರಾಜಣ್ಣ ಎಂಬವರು ತಮ್ಮ ಮೊಮ್ಮಗ ದರ್ಶನ್ ಹಾಗೂ ಆಕೆಯ ತಂಗಿ ನಿಹಾರಿಕಾಳನ್ನು ಹೋಂಡಾ ಆಕ್ಟೀವಾದಲ್ಲಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಜಣ್ಣ ಬೈಕ್ ತಿರುಗಿಸಿಕೊಳ್ಳುವಾಗ ಬೈಕ್‍ನಿಂದ ಮೊಮ್ಮಗ ಕೆಳಗೆ ಬಿದ್ದಿದ್ದಾನೆ. ಅದೇ ವೇಳೆ ಹಿಂದಿನಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಬಾಲಕನ ಮೇಲೆ ಹರಿದಿದೆ. ಬಸ್ ಹರಿದ ಪರಿಣಾಮ ಚಿಕ್ಕ ಬಾಲಕನ ರುಂಡ ತುಂಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರನ್ನ ಹಿಡಿಯುತ್ತಿದ್ದರು. ರಾಜಣ್ಣ ಅವರ ಮೊಮ್ಮಕ್ಕಳು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಹಿಡಿಯುತ್ತಾರೆ ಎಂದು ಅವರಿಂದ ತಪ್ಪಿಸಿಕೊಳ್ಳಲು ಬೈಕ್ ತಿರುಗಿಸಿದ್ರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಆದ್ರೆ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿ, ಬಸ್‍ಗೆ ತೀರಾ ಸಮೀಪ ಬೈಕ್ ಹೋಗಿದ್ದರಿಂದ ಸ್ಕಿಡ್ ಆಗಿ ಬಿದ್ದು, ಬಾಲಕನ ಮೇಲೆ ಬಸ್ ಹರಿದು ಈ ದುರಂತ ನಡೆದಿದೆ ಎಂದು ಹೇಳಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.