ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ಮಂಗಳೂರು, ನೆಲಮಂಗಲ, ಬೆಳಗಾವಿ, ಧಾರವಾಡ ಹಾಗೂ ಬಳ್ಳಾರಿ ಮುಂತಾದ ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
Advertisement
ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರ ಸಣ್ಣ ನೀರಾವರಿ ಇಲಾಖೆಯ ಎಇಇ ಹೇಮಂತ್ ಅವರ ಕಚೇರಿ ಹಾಗೂ ಮನೆ ಸೇರಿದಂತೆ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಇಇ ಹೇಮಂತ್ ಹಾಲಿ ವಾಸವಾಗಿರುವ ಬೆಂಗಳೂರಿನ ವಿದ್ಯಾರಣ್ಯಪುರಂ ನ ನಿವಾಸ ಹಾಗೂ ಸ್ವಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿ ಪೆದ್ದನಹಳ್ಳಿ ಗ್ರಾಮದ ಫಾರಂ ಹೌಸ್ ಹಾಗೂ ನೆಲಮಂಗಲದಲ್ಲಿನ ಹೇಮಂತ್ ಭಾಮೈದ ರಮೇಶ್ ರ ಬಾಡಿಗೆ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ನಗರದ ಸಣ್ಣ ನೀರಾವರಿ ಇಲಾಖೆ ಕಚೇರಿ ಮೇಲೂ ಸದ್ಯ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Advertisement
Advertisement
ತುಮಕೂರಿನಲ್ಲೂ ಎಸಿಬಿ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ತುಮಕೂರು ನಗರದ ಸರಸ್ವತಿಪುರಂ ನಲ್ಲಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದ ತಂಡ ದಾಖಲೆ ಪರಿಶೀಲಿಸುತ್ತಿದೆ. ಕೊರಟಗೆರೆ ತಾಲೂಕಿನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ರ ಮೇಲೆ ಹಲವು ಅಕ್ರಮ ಎಸಗಿದ ಆರೋಪ ಇದೆ. ಅಲ್ಲದೆ ಬೇನಾಮಿ ಆಸ್ತಿ ಮಾಡಿದ ಆಪಾದನೆಯೂ ಇದೆ. ಈ ಹಿನ್ನೆಲೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.
Advertisement
ಮಂಗಳೂರಿನ ಕಿನ್ನಿಗೋಳಿಯ ಪಕ್ಷಿಕೆರೆ ಎಂಬಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಟ್ವಾಳ ಕೃಷಿ ಇಲಾಖೆ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಪಿ.ಎಫ್ ಮಿರಾಂಡಾ ಮನೆಗೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಮೂರು ತಿಂಗಳಲ್ಲಿ ಹುದ್ದೆಯಿಂದ ನಿವೃತ್ತರಾಗಲಿದ್ದ ಮಿರಾಂಡಾ ಕೊನೆಗೂ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮನೆ ಮತ್ತು ಕಚೇರಿಯಲ್ಲಿ ದಾಳಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಕಡತಗಳ ವಶಕ್ಕೆ ಪಡೆದಿದ್ದಾರೆ. ಬೆಳ್ಳಂಬೆಳಗ್ಗೆ ಎಸಿಬಿ ಡಿವೈಎಸ್ಪಿ ಸುಧೀರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಪಕ್ಷಿಕೆರೆಯಲ್ಲಿರುವ ಎರಡು ಅಂತಸ್ತಿನ ಮನೆಯಲ್ಲಿ ಅಧಿಕಾರಿಗಳ ತಂಡ ಬೀಡುಬಿಟ್ಟಿದೆ. ಸಾರ್ವಜನಿಕ ದೂರಿನಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಎಇಇ ಸುರೇಶ ಭೀಮಾನಾಯ್ಕ್ ಮನೆ ಮೇಲೆ ಬೆಳಗಾವಿ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್‍ಪಿ ರುಘು ನೇತೃತ್ವದಲ್ಲಿ 6 ಕಡೆಗಳಲ್ಲಿ ದಾಳಿಯಾಗಿದ್ದು, ಅಕ್ರಮ ಆಸ್ತಿ ಗಳಿಕೆ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕಿತ್ತೂರು, ಖಾನಪುರ ಸೇರಿ ಬೆಳಗಾವಿಯ ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆ ತೋರಣಗಲ್ ತಾಲೂಕಿನ ಷಕ್ಷಾವಲಿ ನಿವಾಸದ ಕಚೇರಿ ಮೇಲೆ ದಾಳಿ ನಡೆದಿದೆ. ಎಸಿಬಿ ಎಸ್ ಪ್ರಸನ್ನ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಧಾರವಾಡದಲ್ಲಿ ಕೂಡ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವಿಭಾಗದ ಎಸಿಎಫ್ ಪಾಂಡುರಂಗ ಪೈ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪೈ ಧಾರವಾಡದಲ್ಲಿ ಮನೆ ಹೊಂದಿದ್ದು, ಧಾರವಾಡ ನಗರದ ಅರ್ಕೆಡ್ ಸಿಲ್ವರ್ ಬಡಾವಣೆಯಲ್ಲಿರೋ ಮನೆಗೆ ಡಿವೈಎಸ್‍ಪಿ ಮಲ್ಲಾಪೂರ ನೇತ್ರತ್ವದಲ್ಲಿ ದಾಳಿ ನಡೆಸಿದ್ದಾರೆ. ಅವರ ಜೊತೆ ಇಬ್ಬರು ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆಯಾಗುತ್ತಿದೆ.
https://www.youtube.com/watch?v=w3-JhajXvL4