– ಎಸಿಬಿಗೆ ಇಡಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಆದಾಯಕ್ಕಿಂತ ಶೇ.2031ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಜಮೀರ್ ಮನೆ ಮೇಲೆ ದಾಳಿ ಪ್ರಕರಣ ಸಂಬಂಧ ಎಸಿಬಿ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಆಗಸ್ಟ್ 6 ರಂದು ಜಮೀರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಎಸಿಬಿ ದಾಳಿ ನಡೆದಿದೆ ಎಂದು ತಿಳಿಸಿದೆ.
ಜಮೀರ್ ಶೇ.2031ರಷ್ಟು ಅಕ್ರಮ ಆಸ್ತಿ ಅಂದರೆ 87,44,05,057 ರೂ. ಆಸ್ತಿ ಹೊಂದಿದ್ದಾರೆ. 2005ರಿಂದ ಆಗಸ್ಟ್ 2021ರ ತನಕದ ಜಮೀರ್ ಆಸ್ತಿಯನ್ನು ಮೌಲ್ಯ ಮಾಪನ ಮಾಡಲಾಗಿದೆ. ದಾಳಿ ಸಂದರ್ಭದಲ್ಲಿ ಕೆಲವೊಂದು ದಾಖಲಾತಿಗಳು ಸಿಕ್ಕಿದ್ದು ಬೇರೆಯವರ ಹೆಸರಿನಲ್ಲಿ ದಾಖಲಾತಿ ಸಿಕ್ಕಿದೆ ಎನ್ನಲಾಗ್ತಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದಮೇರೆಗೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್‌ನಲ್ಲಿರುವ ಜಮೀರ್ ಅವರ ವೈಭವೋಪೇತ ಮನೆ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ಅವರ ಒಡೆತನದ ನ್ಯಾಶನಲ್ ಟ್ರಾವೆಲ್ಸ್ ಕಂಪನಿಯ ಕಚೇರಿ, ಓಕಾ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಹಾಗೂ ಬನಶಂಕರಿಯ ಜೆ.ಕೆ ಅಸೋಸಿಯೇಟ್ಸ್ ಕಚೇರಿ ಸೇರಿ ಐದು ಸ್ಥಳಗಳ ಮೇಲೆ ದಾಳಿ ನಡೆಸಿತ್ತು.
2006ರ ಚಾಮರಾಜಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಶಾಸಕರಾದ ಜಮೀರ್ ಬಳಿಕ ಸತತ 4 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ.
ಶಾಸಕ ಜಮೀರ್ ಆಸ್ತಿ ವಿವರ
ಐಟಿ ಇಲಾಖೆಗೆ ನೀಡಿದ ಆಸ್ತಿ ವಿವರ: 73,94,35,027 ಕೋಟಿ ರೂ.)
ಖರ್ಚು-ವೆಚ್ಚ : 17.80 ಕೋಟಿ ರೂ. (17,80,18,000 – ಕೌಟುಂಬಿಕ ನಿರ್ವಹಣೆ, ಮಗಳ ಮದುವೆ, ಮಗನ ಸಿನಿಮಾ ನಿರ್ಮಾಣ)
ಆದಾಯ : 4.30 ಕೋಟಿ ರೂ. (4,30,48,790 – 17 ವರ್ಷದಲ್ಲಿ ಬಂದಿರುವ ಆದಾಯ)
ಅಕ್ರಮ ಆಸ್ತಿ: 87 ಕೋಟಿ 44 ಲಕ್ಷ ರೂ.( 87,44,05,057 ರೂ.)