ಬೆಂಗಳೂರು: ರಾಜ್ಯದ ಗಮನ ಸೆಳೆದ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸುಮಲತಾ ಅಂಬರೀಶ್ ಅವರು ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ತಾಯಿಯ ಗೆಲುವಿನ ಬಗ್ಗೆ ಪುತ್ರ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿಷೇಕ್ ಅಂಬರೀಶ್ ಅವರು, ಅಧಿಕೃತವಾಗಿ ಫಲಿತಾಂಶ ಹೊರ ಬರುವವರೆಗೂ ನಾನು ಏನೂ ಮಾತನಾಡಬಾರದು ಎಂದು ನಿರ್ಧಾರ ಮಾಡಿದ್ದೇನೆ. ಮಂಡ್ಯ ಜನತೆ ನಮ್ಮನ್ನು ನಂಬಿ ಮತ ಹಾಕಿ ಆಶೀರ್ವಾದ ಮಾಡಿದ್ದಾರೆ ಎಂದರು.
ಬಳಿಕ ಮಾತನಾಡಿದ ಅವರು, ನನ್ನ ತಂದೆ ಹಾಗೂ ನನ್ನ ತಾಯಿ ಸುಮಲತಾ ಅವರ ನಡವಳಿಕೆ, ಅವರು ಮಾತನಾಡಿದ ರೀತಿ ಜನರಿಗೆ ಇಷ್ಟವಾಗಿದೆ. ಹಾಗಾಗಿ ಅವರು ಗೆಲುವು ಸಾಧಿಸಿದ್ದಾರೆ
ಈ ವೇಳೆ ಬಿಜೆಪಿ ಬೆಂಬಲಿಸುತ್ತಾರಾ ಎನ್ನುವ ಪ್ರಶ್ನೆಗೆ, ಸುಮಲತಾ ಅವರು ಏನೇ ನಿರ್ಧಾರ ತೆಗೆದುಕೊಂಡರು ಅದನ್ನು ಜನರ ಮುಂದೆ ನಿರ್ಧರಿಸುತ್ತೇನೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಅವರು ರಾಜಕೀಯದಲ್ಲಿ ಏನೇ ನಿರ್ಧಾರ ತೆಗೆದುಕೊಂಡರು ಅದನ್ನು ಜನರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ತೆಗೆದುಕೊಳ್ಳುತ್ತೇನೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಅವಕಾಶ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅವರಿಗೆ ಒಳ್ಳೆಯದಾಗಲಿ ಎಂದು ಅಭಿಷೇಕ್ ತಮ್ಮ ಗೆಳೆಯ ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭ ಕೋರಿದ್ದಾರೆ.