ನವದೆಹಲಿ: ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ (Praveen Shankar Kapoor) ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಚಿವೆ, ಎಎಪಿ ನಾಯಕಿ ಅತಿಶಿಗೆ ಸಮನ್ಸ್ ನೀಡಿದೆ. ಜೂನ್ 29 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಆಪ್ ಶಾಸಕರಿಗೆ ಬಿಜೆಪಿ ಲಂಚ ನೀಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಅತಿಶಿ (AAP Minister Atishi) ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ಪ್ರವೀಣ್ ಶಂಕರ್ ಕಪೂರ್ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದರು. ಅತಿಶಿ ಹೇಳಿಕೆಯಿಂದ ಬಿಜೆಪಿ ಪಕ್ಷದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಅವರು ದೂರಿದ್ದರು. ಈ ಆರೋಪಗಳನ್ನು ಪರಿಗಣಿಸಿದ ಕೋರ್ಟ್, ಅತಿಶಿಯನ್ನು ಆರೋಪಿ ಎಂದು ಗುರುತಿಸಿ ಜೂನ್ 29 ರಂದು ಹಾಜರಾಗುವಂತೆ ಆದೇಶಿಸಿದೆ.
ಈ ಬಗ್ಗೆ ವಾದ ಮಂಡಿಸಿದ್ದ ಕಪೂರ್ ಪರ ವಕೀಲರು, ಬಿಜೆಪಿಯು 7 ಮಂದಿ ಎಎಪಿ ಶಾಸಕರನ್ನು ಸಂಪರ್ಕಿಸಿದೆ ಮತ್ತು ಪಕ್ಷವನ್ನು ಬದಲಾಯಿಸಲು ಅವರಿಗೆ 25 ಕೋಟಿ ರೂಪಾಯಿಗಳನ್ನು ನೀಡುತ್ತಿದೆ ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಆರೋಪಿಸಿದ್ದಾರೆ. ಎಎಪಿ ನಾಯಕರು ತಮ್ಮ ಆರೋಪಗಳನ್ನು ರುಜುವಾತುಪಡಿಸಲು ಮತ್ತು ಸಾಕ್ಷ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ
ಪಕ್ಷದ ಸಹೋದ್ಯೋಗಿಗಳಾದ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರನ್ನು ಮುಂದಿನ ಎರಡು ತಿಂಗಳಲ್ಲಿ ಬಂಧಿಸಲಾಗುವುದು ಎಂದು ಎಎಪಿ ನಾಯಕಿ ಹೇಳಿದ್ದಾರೆ. ತನ್ನ ಅರ್ಜಿಯಲ್ಲಿ ಅತಿಶಿ ಮಾಡಿದ ಟೀಕೆಗಳನ್ನು ಹಿಂಪಡೆಯಬೇಕು ಮತ್ತು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.