ಮೈಸೂರು: ನಗರದಲ್ಲಿ ಇನ್ಮುಂದೆ ಅಂತ್ಯಸಂಸ್ಕಾರಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು. ಬದುಕಿದ್ದಾಗ ಮಾತ್ರವಲ್ಲ ಸತ್ತಮೇಲು ಆಧಾರ್ ಕಡ್ಡಾಯವಾಗಿದೆ.
ಸ್ಮಶಾನದಲ್ಲಿ ಹೂಳಲು, ಸುಡಲು ಮೃತರ ಆಧಾರ್ ಪ್ರತಿ ಬೇಕು. ಮೃತರಿಂದ ಉಂಟಾಗುವ ಕಾನೂನು ತೊಡಕು ಹಾಗೂ ಕೌಟುಂಬಿಕ ವ್ಯಾಜ್ಯ ನಿವಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಯಾವುದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಬೇಕಿದ್ರೆ ಆಧಾರ್ ಜೆರಾಕ್ಸ್ ಪ್ರತಿ ನೀಡಬೇಕು. ವಾಸ ಧೃಡಿಕರಣ ಯಾವುದಾದರೂ ದಾಖಲೆ ನೀಡಬೇಕು. ಈ ದಾಖಲೆ ಇಲ್ಲವಾದಲ್ಲಿ ಸ್ಮಶಾನದಲ್ಲಿರುವ ಪಾಲಿಕೆ ಅಧಿಕಾರಿಯಿಂದ ಸ್ಥಳ ಪರಿಶೀಲನೆ ನಡೆಸಬೇಕು. ಆ ನಂತರವಷ್ಟೇ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಇದು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರುದ್ರಭೂಮಿ ಹಾಗೂ ಸ್ಮಶಾನಗಳಿಗೆ ಅನ್ವಯವಾಗಿದೆ. ಜನರಿಗೆ ಅನುಕೂಲವಾಗಲೆಂದು ಈ ಕ್ರಮ ಜಾರಿ ಮಾಡಲಾಗಿದೆ. ಅಂತ್ಯಸಂಸ್ಕಾರ ಸಂದರ್ಭದಲ್ಲಿ ತಪ್ಪು ಮಾಹಿತಿ ಅಥವಾ ತಪ್ಪು ಹೆಸರು ನೀಡುತ್ತಿದ್ದರು. ಅಲ್ಲದೆ ಕ್ರೈಂ ನಡೆದಿದ್ದರು ಪೊಲೀಸರಿಗೆ ಮಾಹಿತಿ ಗೊತ್ತಿಲ್ಲದೆ ಅಂತ್ಯಸಂಸ್ಕಾರವಾಗಿದ್ದ ಪ್ರಕರಣ ಇವೆ. ಇದರಿಂದ ಅಂತ್ಯಸಂಸ್ಕಾರವಾಗಿದ್ರೂ ಮತ್ತೆ ಶವ ಹೊರ ತೆಗೆದಿರುವ ಪ್ರಕರಣ ನಡೆದಿವೆ. ಇದಷ್ಟೇ ಅಲ್ಲದೆ ಮರಣ ಪ್ರಮಾಣ ಪತ್ರದಲ್ಲಿ ಹೆಸರು ತಪ್ಪಾದ್ರೆ ಜನರು ಕೋರ್ಟ್ ಗೆ ಅಲೆದಾಡಬೇಕಿತ್ತು. ಈ ಎಲ್ಲಾ ದೃಷ್ಟಿಯಿಂದ ಪಾಲಿಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.