ಮಡಿಕೇರಿ/ಮೈಸೂರು: ಗ್ಯಾಸ್ ಸಿಲಿಂಡರ್, ಪಿಂಚಣಿ ಸೇರಿದಂತೆ ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಜನ ಮುಂದಾಗಿದ್ದಾರೆ. ದಿನಕ್ಕೆ 50 ಮಂದಿಗೆ ಮಾತ್ರ ಟೋಕನ್ ನೀಡುತ್ತಿರುವ ಹಿನ್ನೆಲೆಯಲ್ಲಿ ಟೋಕನ್ ಪಡೆಯಲು ಮುಂಜಾನೆ ಮುನ್ನವೇ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಎಸ್‍ಬಿಐ ಬ್ಯಾಂಕ್ ಎದುರು ಸರತಿ ಸಾಲು ಕಾಣಿಸಿಕೊಂಡಿದೆ.
ಆಧಾರ್ ಕಡ್ಡಾಯ ಮಾಡಲಾಗಿದ್ದರೂ ಕಾರ್ಡ್ ವಿತರಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಎಲ್ಲರೂ ತಾಲೂಕು ಕೇಂದ್ರಕ್ಕೆ ಬರುವುದು ಅನಿವಾರ್ಯವಾಗಿದೆ. ಹಿಂದೆ ಮಾಡಿಸಿದ ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲು ಕೂಡ ಹರಸಾಹಸ ಪಡುವಂತಾಗಿದೆ.
ಪಿರಿಯಾಪಟ್ಟಣ ತಾಲೂಕಿನ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ಬರುತ್ತಿದ್ದಾರೆ. ಆದರೆ ದಿನಕ್ಕೆ 50ರಷ್ಟು ಮಂದಿಗೆ ಆಧಾರ್ ಮಾಡಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಜನ ಮಧ್ಯರಾತ್ರಿ ಮನೆಯಿಂದ ಹೊರಟು ಬಂದು ಟೋಕನ್ ಪಡೆಯಲು ನಿಲ್ಲುವಂತಾಗಿದೆ. ಇದರ ನಡುವೆ ಪ್ರಭಾವ ಹೊಂದಿದವರಿಗೆ ಬೇಗ ಟೋಕನ್ ಸಿಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಮಹಿಳೆಯರು, ಯುವತಿಯರು, ವೃದ್ಧರು, ಅನಾರೋಗ್ಯ ಪೀಡಿತರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಜನರಿಗೆ ಸರಿಯಾದ ಮಾಹಿತಿ ನೀಡಿ ರಾತ್ರಿಯೇ ಬರಬೇಕಾದ ಅಪಾಯವನ್ನು ತಪ್ಪಿಸಲು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ, ಫೋಟೋ ತೆಗೆಯುವ ವ್ಯವಸ್ಥೆ ಮಾಡಿದರೆ, ತಾಲೂಕು ಕೇಂದ್ರದಲ್ಲಿ ಜನ ಕಡಿಮೆಯಾಗಲಿದ್ದಾರೆ. ಇಲ್ಲದಿದ್ದರೆ ಇದೆ ಸಮಸ್ಯೆ ಎದುರಾಗುತ್ತದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.