ಬಳ್ಳಾರಿ: ಭಗ್ನ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿ ಹಾಗೂ ಮತ್ತವರ ಮನೆಯವರ ಮೇಲೆ ಹಲ್ಲೆ ಮಾಡಿ, ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನ್ ಕುಮಾರ್ ಹಲ್ಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವಾತ. ನವೀನ್ ಕುಮಾರ್ ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಮಚ್ಚಿನೇಟು ಬಿದ್ದಿದೆ. ಚಿಕಿತ್ಸೆಗಾಗಿ ಮೂವರನ್ನೂ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಬಳಿಕ ಆರೋಪಿ ನವೀನ್ ಕುಮಾರ್ ಯಶವಂತನಗರದ ಗಂಡಿ ಮಲಿಯಮ್ಮ ದೇಗುಲದ ಬಳಿ ಕಾರು ಬಿಟ್ಟು ಹೋಗಿದ್ದ. ಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಆದರೆ ಇಂದು ಬೆಳಗಿನ ಜಾವ ಆರೋಪಿ ಯಶವಂತ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಂದೆಯನ್ನೇ ಹತ್ಯೆಗೈದು ಹೃದಯಾಘಾತದ ಕತೆಕಟ್ಟಿದ್ದ ಮಗ ಅರೆಸ್ಟ್
ಯುವತಿ ಮತ್ತು ಆರೋಪಿ ನವೀನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದರು. ಬಾಳೆಹಣ್ಣು ವ್ಯಾಪಾರ ಮಾಡ್ತಿದ್ದ ನವೀನ್ ಮತ್ತು ಯುವತಿ ನಡುವೆ ಕಾಲೇಜು ಓದುವಾಗಲೇ ಪ್ರೇಮಾಂಕುರವಾಗಿತ್ತು. ಪ್ರೀತಿಸುವಾಗಲೇ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದರು. ಎಂಎಸ್ಸಿ ಓದುವ ಹಿನ್ನೆಲೆ ಪ್ರೀತಿ ಪ್ರೇಮಕ್ಕೆ ಬ್ರೇಕ್ ಹಾಕೋದಾಗಿ ಯುವತಿ ಹೇಳಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಪಾಪಿನಾಯಕನಹಳ್ಳಿ ಮೂಲದ ನವೀನ್ ನಿನ್ನೆ ಸಂಜೆ ಸಂಡೂರಿಗೆ ಬಂದು ಪ್ರೇಯಸಿ ಮನೆಯ ಮುಂದೆ ಗಲಾಟೆ ಮಾಡಿದ್ದಾನೆ.
ಈ ವೇಳೆ ಗಲಾಟೆ ನಡೆದು ಯುವತಿ ಮತ್ತವರ ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಬಿಡಿಸಲು ಬಂದ ಪ್ರೇಯಸಿಯ ಸಹೋದರನ ಮೇಲೂ ಮಚ್ಚು ಬೀಸಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದ ನವೀನ್. ಬಳಿಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ