ಕೊಪ್ಪಳ: ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿಯಾಗಿರುವ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಯಲಬುರ್ಗಾ ತಾಲೂಕಿನ ರಾಜೂರ ಗ್ರಾಮದ ನಿವಾಸಿ, ಮಾಳೆಕೊಪ್ಪ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅನ್ನಪೂರ್ಣ ಆತ್ಮಹತ್ಯೆಗೆ ಯತ್ನಿಸಿದ ಯುವತಿಯಾಗಿದ್ದಾಳೆ. ಕಳೆದ 9 ತಿಂಗಳ ಹಿಂದೆಯಷ್ಟೇ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆಗೆ ಸೇರಿದ ಅನ್ನಪೂರ್ಣ, ಯಲಬುರ್ಗಾ ತಹಶೀಲ್ದಾರ್ ರಮೇಶ್ ಅಳವಂಡಿಕರ್ ರವರಿಂದ ನಿರಂತರ ಕಿರುಕುಳಕ್ಕೆ ಒಳಗಾಗುತ್ತ ಬಂದಿದ್ದು, ಈ ಬಗ್ಗೆ ಮನೆಯಲ್ಲಿ ತನ್ನ ಪೋಷಕರ ಬಳಿ ಹೇಳಿಕೊಳ್ಳುತ್ತಾ ಬಂದಿದ್ದಾಳೆ.
Advertisement
ಕಳೆದ ದಿನ ಅದೇ ಕಿರುಕುಳ ಮುಂದುವರೆದಿದ್ದರಿಂದ ಕುಕನೂರ ಗ್ರಾಮದ ಲೆಕ್ಕಾಧಿಕಾರಿ ಕಚೇರಿಯಲ್ಲೆ ಹೇನು ಪುಡಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಕೂಡಲೆ ಅಲ್ಲೆ ಇದ್ದ ಕಚೇರಿ ಸಹಾಯಕರು ಕುಕನೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ನೌಕರಿಯಲ್ಲಿದ್ದ ಮಗಳ ಖುಷಿಯನ್ನು ಕಾಣುತ್ತಿದ್ದ ಪಾಲಕರು ಈ ದುಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಮಗಳನ್ನು ಕಳೆದುಕೊಳ್ಳುವ ಪ್ರಸಂಗ ಬಂದಿದೆ ಎಂದು ಅಂತಾ ಯುವತಿ ಪೋಷಕರು ತಹಶಿಲ್ದಾರ್ ವಿರುದ್ದ ಕಿಡಿಕಾರುತ್ತಿದ್ದಾರೆ.
Advertisement