– ಮಹದೇವಪುರ ಪೊಲೀಸರಿಂದ ಇಬ್ಬರು ಕಾಮುಕರ ಬಂಧನ
ಬೆಂಗಳೂರು: ನಗರದ ಕೆಆರ್‌ಪುರಂ ರೈಲ್ವೇ ನಿಲ್ದಾಣದಲ್ಲಿ (KR Puram Railway Station) ಅಣ್ಣನ ಜೊತೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಸಂತ್ರಸ್ತೆಯನ್ನು ಬಿಹಾರ (Bihar) ಮೂಲದವರು ಎಂದು ತಿಳಿಯಲಾಗಿದ್ದು, ಬುಧವಾರ ತಡರಾತ್ರಿ 1:30ರ ಸುಮಾರಿಗೆ ಈ ಘಟನೆ ನಡೆದಿದೆ.ಇದನ್ನೂ ಓದಿ:ಪೊಲೀಸ್ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ
ಸಂತ್ರಸ್ತೆ ತನ್ನ ಅಕ್ಕ-ಬಾವನ ಜೊತೆಗೆ ಕೆಲಸಕ್ಕೆಂದು ಕೇರಳಕ್ಕೆ ಹೋಗಿದ್ದರು. ಆದರೆ ಸಂತ್ರಸ್ತೆಗೆ ಕೆಲಸ ಮಾಡಲು ಇಷ್ಟವಿಲ್ಲದೇ ಬುಧವಾರ ಎರ್ನಾಕುಲಂನಿಂದ (Ernakulam) ಬೆಂಗಳೂರಿಗೆ (Bengaluru) ಬಂದು ಊರಿಗೆ ಹೊರಟಿದ್ದರು. ಈ ವೇಳೆ ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ್ದು, ಆಗ ಅವರು ಕೆಆರ್‌ಪುರ ರೈಲು ನಿಲ್ದಾಣದಲ್ಲಿ ಇಳಿಯುವಂತೆ ಸೂಚಿಸಿದ್ದರು. ಅದರಂತೆ ಸಂತ್ರಸ್ತೆ ಬುಧವಾರ ತಡರಾತ್ರಿ 1:13ಕ್ಕೆ ಕೆಆರ್‌ಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದರು.
ರೈಲು ನಿಲ್ದಾಣಕ್ಕೆ ಬಂದಿದ್ದ ಅಣ್ಣನೊಂದಿಗೆ ಊಟ ಮಾಡಲು ಮಹದೇವಪುರ ಕಡೆಗೆ ಹೋಗುತ್ತಿದ್ದರು. ಈ ವೇಳೆ ದಿಢೀರನೆ ಇಬ್ಬರು ಅಪರಿಚಿತ ಯುವಕರು ಬಂದಿದ್ದು, ಓರ್ವ ಆಸಾಮಿ ಸಂತ್ರಸ್ತೆಯ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೋರ್ವ ಸಂತ್ರಸ್ತೆಯ ಕೈಗಳನ್ನು ಬಿಗಿಯಾಗಿ ಹಿಡಿದು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆಯ ಕಿರುಚಾಟದಿಂದ ಅಲ್ಲಿದ್ದ ಜನರು ಸ್ಥಳಕ್ಕೆ ಬಂದಿದ್ದು, ಬೀದಿ ಕಾಮುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಶಿಫ್ ಹಾಗೂ ಮತ್ತೋರ್ವ ಕಾಮುಕನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇನ್ನೂ ಮಹದೇವಪುರ ಪೊಲೀಸ್ ಠಾಣೆಗೆ (Mahadevapura) ಪೊಲೀಸ್ ಕಮಿಷನರ್ ದಯಾನಂದ್ ಭೇಟಿ ನೀಡಿದ್ದು, ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆಯಿಂದ ಕೃತ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಇದನ್ನೂ ಓದಿ:ಪೊಲೀಸ್ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ