ಹಾಸನ: ಮೊಬೈಲ್ ವಾಪಸ್ ಕೇಳಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಆಟೋ ಚಾಲಕ ಅಶ್ವಥ್ ತೀವ್ರ ಹಲ್ಲೆಗೊಳಗಾದ ಯುವಕ. ಈತ ಬೆಂಗಳೂರಿನಲ್ಲಿ ಆಟೋ ಓಡಿಸುವಾಗ ಅಪರಿಚಿತ ವ್ಯಕ್ತಿಯಿಂದ 2 ಸಾವಿರ ರೂ.ಗೆ ಮೊಬೈಲ್ ಖರೀದಿಸಿದ್ದ. ನಂತರ ಅದೇ ಮೊಬೈಲ್ ಅನ್ನು ತನ್ನ ಸ್ನೇಹಿತ ಸಚಿನ್‍ಗೆ 15 ಸಾವಿರಕ್ಕೆ ಅಶ್ವಥ್ ಮಾರಾಟ ಮಾಡಿದ್ದ.
ಆದರೆ ಮಾರಾಟ ಮಾಡಿದ ಅಪರಿಚಿತ ಯುವಕ ತಾನು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ಮೊಬೈಲ್ ಕದ್ದು ತನಗೆ ನೀಡಿದ್ದಾನೆ ಎನ್ನುವ ವಿಷಯ ಆ ನಂತರದಲ್ಲಿ ಅಶ್ವಥ್‌ಗೆ ತಿಳಿದಿದೆ. ಘಟನೆಯ ಸಂಬಂಧ ಅಪರಿಚಿತ ವ್ಯಕ್ತಿಯ ಬಳಿ ಕೇಳಲು ಆತ ಊರಿಗೆ ಹೋಗಿದ್ದ. ಇದನ್ನೂ ಓದಿ: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ: ಮಾಧುಸ್ವಾಮಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಅಷ್ಟೇ ಅಲ್ಲದೇ, ಮೊಬೈಲ್ ಮಾಲೀಕ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮೊಬೈಲ್ ತಂದು ಕೊಡುವಂತೆ ಅಶ್ವಥ್‍ಗೆ ಕರೆ ಮಾಡಿದ್ದಾರೆ. ತಕ್ಷಣ ಅಶ್ವಥ್ ಮೊಬೈಲ್ ಖರೀದಿಸಿ, ಮಾರಾಟ ಮಾಡಿರುವ ವಿಚಾರವನ್ನು ಪೊಲೀಸರಿಗೆ ಹೇಳಿ ಮೊಬೈಲ್ ವಾಪಸ್ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಚಿನ್‍ಗೆ ಅಶ್ವಥ್ ಫೋನ್ ಮಾಡಿ ಹಣ ವಾಪಸ್ ನೀಡುತ್ತೇನೆ ಮೊಬೈಲ್ ವಾಪಸ್ ಕೊಡುವಂತೆ ಕೇಳಿದ್ದಾನೆ. ಆದರೆ ಸಚಿನ್ ಮೊಬೈಲ್ ಕೊಡದೆ ಸತಾಯಿಸಿದ್ದಾನೆ.
ಅಶ್ವಥ್ ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಕೋಪಗೊಂಡ ಸಚಿನ್ ಮೊಬೈಲ್ ಕೊಡುವುದಾಗಿ ಅಶ್ವಥ್‍ನನ್ನು ಚನ್ನರಾಯಪಟ್ಟಣಕ್ಕೆ ಕರೆಸಿಕೊಂಡಿದ್ದಾನೆ. ತನ್ನ ಐವರು ಸ್ನೇಹಿತರೊಂದಿಗೆ ಅಶ್ವಥ್‍ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಮುಖ ಹಾಗೂ ಕಣ್ಣಿನ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಇದನ್ನೂ ಓದಿ: ಜಮ್ಮುವಿನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ!
ಅಶ್ವಥ್ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ಕಣ್ಣು ಕಾಣದಂತಾಗಿದೆ. ನನ್ನ ಮೇಲೆ ವಿನಾಃಕಾರಣ ಹಲ್ಲೆ ಮಾಡಿದ್ದು ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಅಶ್ವಥ್ ಒತ್ತಾಯಿಸಿದ್ದೇನೆ. ಘಟನೆ ಸಂಬಂಧಿಸಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.