ಚಿತ್ರದುರ್ಗ: ಚುಮು ಚುಮು ಚಳಿಯಲ್ಲಿ ಮಂಜಿನ ಹನಿಯಲಿ, ನರ್ತಿಸುತ್ತಿರೋ ಮೋಡಗಳು. ಆ ಮೋಡಗಳ ಮರೆಯಲ್ಲಿ ಹಸಿರು ಸೀರೆ ಉಟ್ಟು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಸೆಳೆಯುತ್ತಿರೋ ನೈಸರ್ಗಿಕ ಸೊಬಗು. ಈ ದೃಶ್ಯಗಳು ಕಾಣಸಿಗೋದು ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ಗಿರಿಧಾಮದಲ್ಲಿ.
ಹೌದು. ಇಲ್ಲಿ ವರ್ಷವಿಡಿ ಸುಡು ಬಿಸಿಲಿದ್ದರೂ ಜುಲೈ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಾತ್ರ ಚುಮು ಚುಮು ಚಳಿ, ಮಂಜಿನ ಹನಿ ಹಾಗೂ ಮೋಡಗಳ ನರ್ತನ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಅದರಲ್ಲೂ ಸೈಕ್ಲೋನ್ ಎಫೆಕ್ಟ್ ಹಾಗೂ ಒಂದೆರೆಡು ಮಳೆಹನಿ ಭೂಮಿಗೆ ಬಿತ್ತಂದ್ರೆ ಸಾಕು. ಈ ಜೋಗಿಮಟ್ಟಿಯಲ್ಲಿ ಒಂದು ಸುಂದರ ಪ್ರಕೃತಿಧಾಮ ನಿರ್ಮಾಣವಾಗುತ್ತದೆ. ಹೀಗಾಗಿ ಇಲ್ಲಿಗೆ ನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅವರ ಮನದಲ್ಲಿನ ದುಗುಡ ಹಾಗೂ ತಲೆಯಲ್ಲಿನ ಟೆನ್ಶನ್ ಎಲ್ಲವನ್ನೂ ಬದಿಗಿಟ್ಟು ಒಂದು ಕ್ಷಣ ಮೈಮರೆತು ಕೂರುವಂತೆ ಆಕರ್ಷಿಸುತ್ತದೆ. ಹೀಗಾಗಿ ಈ ತಾಣ ನಿಜವಾಗಿಯೂ ಪ್ರವಾಸಿಗರ ಪಾಲಿನ ಸ್ವರ್ಗ ಎನಿಸಿದೆ.
Advertisement
Advertisement
ಚಿತ್ರದುರ್ಗದಿಂದ ಸುಮಾರು 9 ಕಿ.ಮೀ ದೂರವಿರುವ ಈ ಜೋಗಿಮಟ್ಟಿ ಗಿರಿಧಾಮದ ಅಂಕು-ಡೊಂಕಿನ ರಸ್ತೆ ಹಾಗೂ ಕಣ್ಮುಂದೆ ಯಾರೇ ಬಂದರೂ ಕಾಣದಂತಹ ಮಂಜಿನ ಮುಸುಕು ಮನಸ್ಸಿಗೆ ಮುದ ನೀಡುತ್ತದೆ. ಹೀಗಾಗಿ ಈ ಸೊಬಗನ್ನು ಸವಿಯಲು ನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಜೋಗಿಮಟ್ಟಿ ಪ್ರವೇಶಕ್ಕಾಗಿ, ಅರಣ್ಯ ಇಲಾಖೆ ಒಬ್ಬರಿಗೆ 25 ರೂ. ಟಿಕೆಟ್ ದರ ಸಹ ನಿಗದಿ ಮಾಡಿದೆ.
Advertisement
ಪ್ರವೇಶ ದ್ವಾರದಲ್ಲೇ ಜನರನ್ನು ಆಕರ್ಷಿಸುವ ಆಕರ್ಷಕ ಮಹಾದ್ವಾರದ ಮೇಲೆ ರಚಿಸಿರುವ ವನ್ಯಪ್ರಾಣಿಗಳ ಕಲಾಕೃತಿ, ರಸ್ತೆ ಬದಿಯಲ್ಲಿರೋ ಕಾಡಿನ ಹೂವು, ಹಣ್ಣುಗಳು ಹಾಗೂ ಔಷಧಿ ಸಸ್ಯಗಳ ಸುಹಾಸನೆಯ ಸ್ವಾದ ಅನುಭವಿಸಲು ಸ್ವರ್ಗ ಸುಖವೇ ಸರಿ. ಆದರೆ ವನ್ಯಮೃಗಗಳಿರೋ ತಾಣದ ಕಾಡಿನೊಳಗೆ ಟಿಕೆಟ್ ಪಡೆದು ಪ್ರವಾಸಿಗರನ್ನು ಕಳುಹಿಸುವ ಅರಣ್ಯ ಇಲಾಖೆ ಅವರ ಜೀವಕ್ಕೆ ಗ್ಯಾರಂಟಿ ಮಾತ್ರ ಕೊಡಲ್ಲ. ಪುನಃ ವಾಪಾಸ್ ಬರೋ ನಂಬಿಕೆ ಕೂಡ ಬಂದವರಿಗಿರಲ್ಲ ಎಂಬ ಆತಂಕ ಪ್ರವಾಸಿಗರಲ್ಲಿ ಕಾಡುತ್ತಿದೆ.
Advertisement
ಯಾಕಂದ್ರೆ ಈ ಕಾಡಿನೊಳಗೆ ಚಿರತೆ, ಕರಡಿ, ಹಾವುಗಳು ಹಾಗೂ ಕಾಡುಹಂದಿಗಳು ಸಹ ವಾಸವಾಗಿವೆ. ಹೀಗಾಗಿ ಪ್ರವಾಸಿಗರ ಪ್ರವೇಶದಿಂದ ಆ ಪ್ರಾಣಿಗಳ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರಲಿದ್ದು, ಇಲ್ಲಿನ ಅಪರೂಪದ ಪ್ರಾಣಿಗಳು ಸಹ ವಿನಾಶದ ಅಂಚಿನಲ್ಲಿವೆ. ಆದ್ದರಿಂದ ಜೋಗಿಮಟ್ಟಿ ಪ್ರವೇಶಕ್ಕಾಗಿ ಒಂದು ಶಬ್ದರಹಿತ ಎಲೆಕ್ಟ್ರಾನಿಕ್ ವಾಹನವನ್ನು ಬಳಸುವ ಮೂಲಕ ಪ್ರವಾಸಿಗರ ರಕ್ಷಣೆ ಹಾಗೂ ಕಾಡುಪ್ರಾಣಿಗಳ ಹಿತ ಕಾಯುವ ಕಾರ್ಯಕ್ಕೆ ಇಲಾಖೆ ಮುಂದಾಗಬೇಕೆಂಬ ಆಗ್ರಹ ಕೇಳಿಬಂದಿದೆ.
ಒಟ್ಟಾರೆ ಊಟಿ ಹಾಗು ಡಾರ್ಜಲಿಂಗ್‍ನಂತಹ ಪ್ರಕೃತಿ ಸೌಂದರ್ಯದ ತಾಣಗಳನ್ನು ಮೀರಿಸುವಂತಹ ಸೊಬಗು, ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿಯಲ್ಲಿ ಪ್ರವಾಸಿಗರಿಗೆ ಸುಲಭವಾಗಿ ಸಿಗುತ್ತಿದೆ. ಹೀಗಾಗಿ ಪ್ರವಾಸಿಗರು ಕೂಡ ಈ ಮಂಜು ಹಾಗೂ ಮೋಡಗಳ ನರ್ತನಕ್ಕೆ ಫುಲ್ ಫಿದಾ ಆಗಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಪ್ರವಾಸಿಗರ ರಕ್ಷಣೆ ಹಾಗೂ ವನ್ಯಜೀವಿಗಳ ಹಿತ ಕಾಯಲು ಅಗತ್ಯ ಕ್ರಮಕೈಗೊಳ್ಳಬೇಕು. ಈ ಮೂಲಕ ಪ್ರವಾಸಿಗರು ಹಾಗೂ ಈ ನೈಸರ್ಗಿಕ ಸೊಬಗನ್ನು ನಿರಾತಂಕವಾಗಿ ಸವಿಯುವ ಅವಕಾಶವನ್ನು ಕಲ್ಪಿಸಬೇಕಿದೆ.