– ಪರಾರಿ ವೇಳೆ ಪೊಲೀಸರಿಗೂ ಗುಂಡು ಹಾರಿಸಿದ್ದ ಯೋಧ
– 11 ವರ್ಷದ ಕೇಸ್ ಗೆ ಇಂದು ಮುಕ್ತಿ
ಹುಬ್ಬಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ಹನ್ನೊಂದು ವರ್ಷಗಳ ಹಿಂದೆ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧನಿಗೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸುವಂತೆ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.
ಬೆಟದೂರು ಗ್ರಾಮದ ಶಂಕ್ರಪ್ಪ ತಿಪ್ಪಣ್ಣ ಜೀವಾವಧಿ ಶಿಕ್ಷೆಗೀಡಾದ ಅಪರಾಧಿ. ಇದೇ ಗ್ರಾಮದ ಯಲ್ಲಪ್ಪ ಭಜಂತ್ರಿ(38), ಮಕ್ಕಳಾದ ಸೋಮಪ್ಪ ಭಜಂತ್ರಿ(11) ಹಾಗೂ ಐಶ್ವರ್ಯ ಭಜಂತ್ರಿ(9)ಯನ್ನು ಹತ್ಯೆ ಮಾಡಿದ್ದು, ಈ ಗುಂಡಿನ ಚಕಮಕಿಯಲ್ಲಿ ಮದನಕುಮಾರ್ ಗಾಯಗೊಂಡಿದ್ದರು.
Advertisement
Advertisement
2010 ರಲ್ಲಿ ನಡೆದಿದ್ದ ಭೀಕರ ಹತ್ಯೆ ಘಟನೆ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಕುಂದಗೋಳ ಠಾಣೆಯ ಅಂದಿನ ಇನ್‍ಸ್ಪೆಕ್ಟರ್ ಅರುನ್ ಕುಮಾರ್ ಹಪ್ಪಳಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ
Advertisement
ಈ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಮತ್ತು ಜಿಲ್ಲಾ ಸತ್ತ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಎನ್.ಬಿರಾದಾರ್ ಅವರು ಯೋಧನಿಗೆ 24 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿದಂತೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಲು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್, ತಮ್ಮಿನಾಳ ವಾದ ಮಂಡಿಸಿದ್ದರು.
Advertisement
ಪ್ರಕರಣದ ವಿವರ: ಸಿಆರ್‌ಪಿಎಫ್ ಯೋಧ ಶಂಕ್ರಪ್ಪ 2010 ರಲ್ಲಿ ಮದುವೆಯಾಗಿದ್ದರು. ನಾಲ್ಕೈದು ತಿಂಗಳಲ್ಲೇ ಗಂಡ – ಹೆಂಡತಿ ನಡುವೆ ಜಗಳವಾಗಿ, ಹೆಂಡತಿ ತವರು ಸೇರಿದ್ದಳು. ಇದಕ್ಕೆ ತನ್ನ ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಕುಟುಂಬದವರೇ ಕಾರಣ ಎಂದು ಶಂಕ್ರಪ್ಪ ತಿಳಿದುಕೊಂಡಿದ್ದನು. ಇದರ ಜೊತೆಗೆ ಹುಬ್ಬಳ್ಳಿಯಲ್ಲಿರುವ ತಾಯಿಯ ಆಸ್ತಿಯೂ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ನೆರವಾಗಲಿಲ್ಲ ಎಂದು ತಿಳಿದುಕೊಂಡಿದ್ದು, ಈ ದ್ವೇಷದಿಂದ ಯಲ್ಲಪ್ಪನ ಕುಟುಂಬವನ್ನು ಸರ್ವನಾಶ ಮಾಡಬೇಕೆಂದು ಹೊಂಚು ಹಾಕಿದ್ದ.
ಅಕ್ರಮವಾಗಿ ತಂದಿದ್ದ ಪಿಸ್ತೂಲ್ ಇಟ್ಟುಕೊಂಡು 20 ಆಗಸ್ಟ್ 2010 ರಂದು ಮಧ್ಯರಾತ್ರಿ ಯಲ್ಲಪ್ಪನ ಮನೆಗೆ ಶಂಕ್ರಪ್ಪ ತೆರಳಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ನಂತರ ಏಕಾಏಕಿ ಪಿಸ್ತೂಲ್ ತೆಗೆದು ಯಲ್ಲಪ್ಪನ ಹಣಿಗೆ ಹಾರಿಸಿದ್ದ. ಇದರಿಂದ ಗಾಬರಿಗೊಂಡ ಯಲ್ಲಪ್ಪನ ಪತ್ನಿ ಗೀತಾ ಹಾಗೂ ಮಕ್ಕಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಯಲ್ಲಪ್ಪನ ಮಕ್ಕಳಾದ ಸೋಮಪ್ಪ ಹಾಗೂ ಐಶ್ವರ್ಯಳಿಗೂ ಗುಂಡು ಹಾರಿಸಿ ಅವರನ್ನು ಕೊಲೆ ಮಾಡಿದ್ದ. ಮದನಕುಮಾರನಿಗೂ ಗುಂಡು ಹಾರಿಸಿ ಗಾಯಪಡಿಸಿ ಪರಾರಿಯಾಗಿದ್ದು, ಅದೃಷ್ಟವಶಾತ್ ಯಲ್ಲಪ್ಪನ ಪತ್ನಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್
ಪೊಲೀಸರಿಗೂ ಗುಂಡು ಹಾರಿಸಿದ್ದ!
ಬೆಟದೂರು ಗ್ರಾಮದಲ್ಲಿ ಯಲ್ಲಪ್ಪ ಭಜಂತ್ರಿ ಸೇರಿ ಮೂವರ ಹತ್ಯೆಗೈದ ನಂತರ ಶಂಕ್ರಪ್ಪ ಯಾರದ್ದೋ ಬೈಕ್ ಹತ್ತಿ ದಾವಣಿಗೆರೆ ಕಡೆಗೆ ತೆರಳಿದ್ದ. ಈತನ ಸಂಶಯಾಸ್ಪದ ನಡೆ ಕಂಡ ಪೊಲೀಸರು ಆತನನ್ನು ಹಿಡಿಯಲು ಬೆನ್ನಟ್ಟಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸರೊಬ್ಬರ ಹೊಟ್ಟೆಗೆ ಗುಂಡು ಹಾರಿಸಿ ಗಾಯಪಡಿಸಿದ್ದ. ಬಳಿಕ ದಾವಣಗೆರೆ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶಂಕ್ರಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಟದೂರು ಶೂಟೌಟ್ ಪ್ರಕರಣದ ಬಗ್ಗೆಯೂ ಬಾಯಿ ಬಿಟ್ಟಿದ್ದ. ಈ ವೇಳೆ ಶಂಕ್ರಪ್ಪ ಅಕ್ರಮವಾಗಿ ಇಟ್ಟುಕೊಂಡಿದ್ದ ಪಿಸ್ತೂಲ್, 28 ಸಜೀವ ಗುಂಡುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲೂ ಶಂಕ್ರಪ್ಪ 8 ವರ್ಷ ಶಿಕ್ಷೆ ಅನುಭವಿಸಿದ್ದಾನೆ.