ತುಮಕೂರು: ಶಾಸಕ ಗೋಪಾಲಯ್ಯ ಸಹೋದರ ಬಸವರಾಜ್ ಪುತ್ರಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ರೌಡಿಶೀಟರ್ ಬರ್ಬರವಾಗಿ ಕೊಲೆಯಾಗಿದ್ದಾನೆ.
ತುಮಕೂರು ತಾಲೂಕಿನ ಮೂಲದ ಹಾಗೂ ಕಾಮಕ್ಷಿಪಾಳ್ಯ ರೌಡಿಶೀಟರ್ ಮನು ಕೊಲೆಯಾದ ವ್ಯಕ್ತಿ. ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಬಳಿ ಹಾಡಹಗಲೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಸವರಾಜ್ ಪುತ್ರಿಯನ್ನು ಮನು ಮದುವೆಯಾಗಿದ್ದ. ಹೀಗಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?:
ಕಾಮಕ್ಷಿಪಾಳ್ಯ ಠಾಣೆ ರೌಡಿಶೀಟರ್ ಮನು ಬಸವರಾಜ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಮದುವೆಯಾಗಿದ್ದ ಮನು ಬಸವರಾಜ್ ಅವರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಸೇರಿ ಎರಡು ತಿಂಗಳ ಹಿಂದೆ ಮನೆಯಿಂದ ಪರಾರಿಯಾಗಿದ್ದರು. ಮಗಳು ಕಾಣೆಯಾಗಿರುವ ಕುರಿತು ಬಸವರಾಜ್ ಕಾಮಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ರೌಡಿಶೀಟರ್ ಮನು ಪರಿಚಯದ ಹುಡುಗರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇತ್ತ ಬಸವರಾಜ್ ಕುಟುಂಬಸ್ಥರು ಮನುಗಾಗಿ ಹುಡುಕಾಟ ನಡೆಸಿದ್ದರು.
ನನ್ನ ವಿರುದ್ಧ ಕೊಲೆ ಸಂಚು ರೂಪಿಸಿದ್ದಾರೆ ಎಂದು ತಿಳಿಸಿ ರೌಡಿಶೀಟರ್ ಮನು ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಇದೇ ಮಾತನಾಡಿದ್ದ ಬಸವರಾಜ್ ಪುತ್ರಿ ಕೂಡ, ನಮ್ಮ ತಂದೆಯ ಕಡೆಯವರು ನಮಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಹೇಳಿಕೊಂಡಿದ್ದಳು. ಹೀಗಾಗಿ ಬಸವರಾಜ್ ಕುಟುಂಬಸ್ಥರೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮನು ಹೇಳಿದ್ದೇನು?:
ಕಿರಣ್ ಎಂಬವನು ನನ್ನನ್ನು ಹುಡುಕಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ನನ್ನ ವಿರುದ್ಧ ಸುಪಾರಿ ಕೊಡಲಾಗಿದೆ. ಎಲ್ಲರೂ ಸೇರಿ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಇದೊಂದು ಬಾರಿ ನನ್ನನ್ನು ಕ್ಷಮಿಸಿ, ಬಸವರಾಜ್ ಅವರ ಮಗಳು ನನ್ನ ತುಂಬಾ ಪ್ರೀತಿಸುತ್ತಾಳೆ. ನಾನು ಆಕೆಯನ್ನು ಅಪಹರಿಸಿಲ್ಲ. ನನಗೆ ಯಾರೂ ಬೆಂಬಲ ನೀಡಿಲ್ಲ. ನೀವು ದಯವಿಟ್ಟು ಯಾರಿಗೂ ತೊಂದರೆ ಕೊಡಬೇಡಿ ಎಂದು ಮನು ಫೇಸ್ ಬುಕ್ ಲೈವ್ ವಿಡಿಯೋ ಮೂಲಕ ಪೊಲೀಸರಲ್ಲಿ ಕೇಳಿಕೊಂಡಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv