ಜೈ ಶ್ರೀರಾಮ್ ಹೇಳುವಂತೆ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ

Public TV
1 Min Read
koppala assault

ಕೊಪ್ಪಳ: ಗಂಗಾವತಿ ನಗರದ ಸಿದ್ದಿಕೇರಿ ಸಮೀಪದ ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ ಮುಸ್ಲಿಂ ವ್ಯಕ್ತಿಗೆ ʼಜೈ ಶ್ರೀರಾಮ್ʼ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸ್ಥಳಕ್ಕೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿಯನ್ನು ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ಒಳಗಾಗಿರುವ ವ್ಯಕ್ತಿಯನ್ನು ಮೈಬೂಬ್ ನಗರದ ಹುಸೇನಸಾಬ್ ಎಂದು ಗುರುತಿಸಲಾಗಿದೆ.

ನವೆಂಬರ 25 ರಂದು ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿ ಮಧ್ಯರಾತ್ರಿಯ ವೇಳೆಯಲ್ಲಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೋಗಾಗಿ ಕಾಯುತ್ತಿದ್ದೆ. ಆ ವೇಳೆಯಲ್ಲಿ ಬೈಕ್‌ನಲ್ಲಿ ಬಂದ ಯುವಕರು ಬಲವಂತವಾಗಿ ಬೈಕ್ ಮೇಲೆ ಕೂಡಿಸಿಕೊಂಡು ಸಿದ್ದಿಕೇರಿ ಸಮೀಪದ ರೈಲ್ವೆ ಬ್ರಿಡ್ಜ್ ಕೆಳಗಡೆ ಕರೆದುಕೊಂಡು ಹೋದರು. ಜೈ ಶ್ರೀರಾಮ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬಳಿ ಇದ್ದಂಥ ಹಣವನ್ನು ಸಹ ಕಳ್ಳತನ ಮಾಡಿಕೊಂಡು ನನ್ನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗಿನ ಜಾವ ಕುರಿ ಕಾಯುವವರು ನನ್ನನ್ನು ಮನೆಗೆ ಕರೆದುಕೊಂಡು ಬಿಟ್ಟಿದ್ದಾರೆ ಎಂದು ಹುಸೇನಸಾಬ್‌ ದೂರು ನೀಡಿದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೇನಸಾಬ್ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಸ್ಥಳಕ್ಕೆ ಭೇಟಿಯನ್ನು ನೀಡಿ ಎಸ್‌ಪಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ವ್ಯಕ್ತಿಗಳಿಂದ ಮಾಹಿತಿಯನ್ನು ಸಹ ಪಡೆದುಕೊಳ್ಳಲಾಗಿದೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಆದಷ್ಟು ಬೇಗನೆ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.

Share This Article